ಕುನಾಲ್ ಕಾಮ್ರಾ ಷೋ ನಡೆದಿದ್ದ ಹ್ಯಾಬಿಟೇಟ್ ಕಾಮಿಡಿ ಕ್ಲಬ್ ಮೇಲೆ ಗುಂಪು ದಾಳಿ ನಡೆಸುತ್ತಿದ್ದಾಗ ಪೋಲಿಸರು ಮೌನವೀಕ್ಷಕರಾಗಿದ್ದರು; ಸಿಸಿಟಿವಿ, ಪ್ರತ್ಯಕ್ಷದರ್ಶಿಗಳಿಂದ ಬಹಿರಂಗ

PC : thewire.in
ಮುಂಬೈ: ಎರಡು ವಾರಗಳ ಹಿಂದೆ ಕುನಾಲ್ ಕಾಮ್ರಾ ಕಾಮಿಡಿ ಷೋ ನಡೆದಿದ್ದ ಮುಂಬೈನ ಹ್ಯಾಬಿಟೇಟ್ ಕಾಮಿಡಿ ಕ್ಲಬ್ ಅನ್ನು ಧ್ವಂಸಗೊಳಿಸಿದ್ದ ಶಿವಸೇನೆ ನಾಯಕರ ಗುಂಪಿನೊಂದಿಗೆ ಮುಂಬೈ ಪೋಲಿಸ್ ಅಧಿಕಾರಿಗಳೂ ಇದ್ದರು ಎಂಬ ಆಘಾತಕಾರಿ ವಿಷಯ ಸುದ್ದಿ ಜಾಲತಾಣ ‘ದಿ ವೈರ್’ ನಡೆಸಿದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
‘ದಿ ವೈರ್’ ಸ್ಥಳದಲ್ಲಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ದುಷ್ಕರ್ಮಿಗಳು ಕ್ಲಬ್ ಅನ್ನು ಧ್ವಂಸಗೊಳಿಸುತ್ತಿದ್ದಾಗ ಪೋಲಿಸ್ ಅಧಿಕಾರಿಗಳು ಹಿಂಸಾಚಾರವನ್ನು ತಡೆಯಲು ಪ್ರಯತ್ನಿಸದೆ ಸುಮ್ಮನೆ ನಿಂತಿದ್ದು ಈ ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ದೃಶ್ಯಾವಳಿಗಳು ಈಗ ಖಾರ್ ಪೋಲಿಸರ ವಶದಲ್ಲಿದ್ದು, ಹಿಂಸಾಚಾರ ಕುರಿತು ತಮ್ಮ ತನಿಖೆಯ ಭಾಗವಾಗಿ ಅವುಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಗಲಾಟೆ ನಡೆದಾಗ ಕ್ಲಬ್ ನಲ್ಲಿ ಉಪಸ್ಥಿತರಿದ್ದ ಇಬ್ಬರು ಪ್ರತ್ಯಕ್ಷದರ್ಶಿಗಳನ್ನೂ ‘ದಿ ವೈರ್’ ಸಂದರ್ಶಿಸಿದೆ. ಕ್ಲಬ್ ನ ಒಳಗೆ ಮತ್ತು ಹೊರಗೆ ಕನಿಷ್ಠ ಎಂಟು ಪೋಲಿಸ್ ಅಧಿಕಾರಿಗಳಿದ್ದರು ಮತ್ತು ಅವರು ಗುಂಪು ದಾಳಿ ನಡೆಸುತ್ತಿದ್ದನ್ನು ನೋಡುತ್ತ ನಿಂತಿದ್ದರು ಎಂದು ಈ ಪ್ರತ್ಯಕ್ಷದರ್ಶಿಗಳು ದೃಢಪಡಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ದೃಢಪಡಿಸಿಕೊಳ್ಳಲು ‘ದಿ ವೈರ್’ಗೆ ಸಾಧ್ಯವಾಗಿಲ್ಲ. ಆದರೆ ದೃಶ್ಯಾವಳಿಗಳು ತೋರಿಸಿರುವುದನ್ನು ಪ್ರತ್ಯಕ್ಷದರ್ಶಿಗಳು ದೃಢಪಡಿಸಿದ್ದಾರೆ.
ಗುಂಪು ಕ್ಲಬ್ ಗೆ ಮತ್ತು ಕ್ಲಬ್ ಇರುವ ಯುನಿಕಾಂಟಿನೆಂಟಲ್ ಹೋಟೆಲ್ ನ ಪ್ರವೇಶದ್ವಾರಕ್ಕೆ ಹಾನಿಯನ್ನುಂಟು ಮಾಡುತ್ತಿದ್ದಾಗ ಹೊರಗೆ ಪೋಲಿಸ್ ವ್ಯಾನ್ ನಿಂತಿದ್ದನ್ನೂ ಪ್ರತ್ಯಕ್ಷದರ್ಶಿಗಳು ದೃಢಪಡಿಸಿದ್ದಾರೆ. ದುಷ್ಕರ್ಮಿಗಳು ತಮ್ಮ ಅಟ್ಟಹಾಸವನ್ನು ಮೆರೆದ ಬಳಿಕ ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗುತ್ತ ಅಲ್ಲಿಂದ ತೆರಳಲು ಪೋಲಿಸರು ಅವಕಾಶ ನೀಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
‘ಗುಂಪು ಹ್ಯಾಬಿಟಾಟ್ ಅನ್ನು ಧ್ವಂಸಗೊಳಿಸುತ್ತಿದ್ದಾಗ ಕೆಲವೇ ಮೀಟರ್ ಗಳ ಅಂತರದಲ್ಲಿ ರಸ್ತೆಯಲ್ಲಿ ಇಬ್ಬರು ಪೋಲಿಸರು ಹಾಯಾಗಿ ಚಹಾ ಕುಡಿಯುತ್ತಿದ್ದರು. ಅವರು ನಮ್ಮನ್ನು ರಕ್ಷಿಸಲು ಬಂದಿದ್ದರೋ ಅಥವಾ ಗುಂಪನ್ನು ಬೆಂಬಲಿಸಲೋ ಎನ್ನುವುದು ನಮಗೆ ಗೊತ್ತಿಲ್ಲ’ ಎಂದು ಓರ್ವ ಪ್ರತ್ಯಕ್ಷದರ್ಶಿ ಹೇಳಿದ.
ಪೋಲಿಸರು ಅಸಹಾಯಕರಾಗಿ ನಿಂತಿದ್ದರು. ಯಾವುದೇ ಹಂತದಲ್ಲಿಯೂ ಅವರು ಮಧ್ಯ ಪ್ರವೇಶಿಸಿರಲಿಲ್ಲ ಎಂದು ಇನ್ನೋರ್ವ ಪ್ರತ್ಯಕ್ಷದರ್ಶಿ ತಿಳಿಸಿದ.
ಈ ಹೊಸ ಸಾಕ್ಷ್ಯವು ಈ ದಾಳಿಕೋರರು ಹೊಂದಿದ್ದ ರಾಜಕೀಯ ಸಂಪರ್ಕಗಳನ್ನು ಪರಿಗಣಿಸಿದರೆ ಘಟನೆಗೆ ಪೋಲಿಸರ ಪ್ರತಿಕ್ರಿಯೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಹಾರಾಷ್ಟ್ರ ಮತ್ತು ಕೇಂದ್ರ ಸರಕಾರಗಳಲ್ಲಿ ನಿರ್ಣಾಯಕ ಪಾತ್ರವನ್ನು ಹೊಂದಿರುವ ಶಿವಸೇನೆಯು ಕ್ಲಬ್ ಮೇಲೆ ದಾಳಿ ನಡೆಸಿದ ಗುಂಪಿನೊಂದಿಗೆ ನೇರ ಸಂಬಂಧವನ್ನು ಹೊಂದಿದೆ. ಹಿಂಸಾಚಾರವನ್ನು ಸಮರ್ಥಿಸಿಕೊಂಡಿರುವ ಶಿವಸೇನೆ ಮುಖ್ಯಸ್ಥ ಹಾಗೂ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು, ಅದು ಕ್ರಿಯೆಗೆ ‘ಪ್ರತಿಕ್ರಿಯೆ’ಯಾಗಿತ್ತು ಎಂದು ಬಣ್ಣಿಸಿದ್ದಾರೆ.
ಗುಂಪಿನ ವಿರುದ್ಧ ಪೋಲಿಸರು ದಾಖಲಿಸಿರುವ ಎಫ್ಐಆರ್ ನಲ್ಲಿ ಗುಂಪನ್ನು ತಡೆಯಲು ತಾವು ಪದೇ ಪದೇ ಪ್ರಯತ್ನಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಇದಕ್ಕೆ ತದ್ವಿರುದ್ಧವಾಗಿವೆ.
ಮಾ.23ರಂದು ಶಿಂದೆ ನೇತೃತ್ವದ ಶಿವಸೇನೆ ಕಾರ್ಯಕರ್ತರನ್ನು ಒಳಗೊಂಡಿದ್ದ ಗುಂಪು ಶಿಂದೆ ವಿರುದ್ಧ ಹಾಸ್ಯಚಟಾಕಿಗಳನ್ನು ಹಾರಿಸಿದ್ದ ಸ್ಟ್ಯಾಂಡಪ್ ಕಾಮಿಡಿಯನ್ ಕುನಾಲ್ ಕಾಮ್ರಾರ ಕಾರ್ಯಕ್ರಮದ ವಿರುದ್ಧ ಕ್ಲಬ್ ನ ಆವರಣದಲ್ಲಿ ದಾಂಧಲೆ ನಡೆಸಿತ್ತು. ಕಾಮ್ರಾರ ಕಾರ್ಯಕ್ರಮವನ್ನು ಇದೇ ಕ್ಲಬ್ ನಲ್ಲಿ ಚಿತ್ರೀಕರಿಸಲಾಗಿತ್ತು.
ಪೋಲಿಸರು ಕಾಮ್ರಾ ವಿರುದ್ಧ ತ್ವರಿತವಾಗಿ ಎಫ್ಐಆರ್ ದಾಖಲಿಸಿದ್ದರಾದರೂ ಗುಂಪಿನಲ್ಲಿದ್ದ 19 ಜನರ ವಿರುದ್ಧ ಎಫ್ಐಆರ್ ದಾಖಲಿಸಲು ಅವರಿಗೆ ಗಂಟೆಗಳೇ ಬೇಕಾಗಿದ್ದವು. ಕೇವಲ 12 ಜನರನ್ನು ಬಂಧಿಸಿದ್ದ ಪೋಲಿಸರು ಕೆಲವೇ ಗಂಟೆಗಳ ಬಳಿಕ ಅವರನ್ನು ಬಿಡುಗಡೆಗೊಳಿಸಿದ್ದರು.
ಸೌಜನ್ಯ: thewire.in