ರಾಮ- ಸೀತೆ ಜನ್ಮ ಸ್ಥಾನ ಸಂಪರ್ಕಿಸಲು ವಿಶೇಷ ರೈಲು
Photo: wiki/Amrit_Bharat_
ಹೊಸದಿಲ್ಲಿ: ಮೂಲತಃ ವಲಸೆ ಕಾರ್ಮಿಕರಿಗಾಗಿ ವ್ಯವಸ್ಥೆಗೊಳಿಸಿರುವ ಹೊಚ್ಚಹೊಸ ನ್ಯೂ ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲು, ರಾಮನ ಜನ್ಮಸ್ಥಾನವಾದ ಅಯೋಧ್ಯೆ ಮತ್ತು ಬಿಹಾರದಲ್ಲಿರುವ ಸೀತೆಯ ಜನ್ಮಸ್ಥಾನವಾದ ದರ್ಭಾಂಗ ನಡುವೆ ಚೊಚ್ಚಲ ಸಂಚಾರ ಕೈಗೊಳ್ಳಲಿದೆ.
ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 30ರಂದು ಈ ವಿಶೇಷ ರೈಲಿಗೆ ಚಾಲನೆ ನೀಡುವರು. ಅಯೋಧ್ಯೆ ಮತ್ತು ದೆಹಲಿ ನಡುವೆ ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಈ ವಿಶೇಷ ರೈಲಿಗೂ ಹಸಿರು ನಿಶಾನೆ ತೋರುವರು.
ಮೊಟ್ಟಮೊದಲ ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲು ದೆಹಲಿ ಮತ್ತು ದರ್ಭಾಂಗ ನಡುವೆ ಸಂಚರಿಸಲು ಉದ್ದೇಶಿಸಿದ್ದರೂ, ಉದ್ಯೋಗ ಅರಸಿ ದೂರದ ಊರುಗಳಿಗೆ ತೆರಳಲಿರುವ ಕಾರ್ಮಿಕರ ಉಪಯೋಗಕ್ಕಾಗಿ ವಿನ್ಯಾಸಗೊಳಿಸಲಾಗಿರುವ ಈ ರೈಲನ್ನು ವಿಶೇಷ ಮಹತ್ವದ ಹಿನ್ನೆಲೆಯಲ್ಲಿ ವಿಶೇಷ ಓಡಾಟಕ್ಕೆ ಉದ್ದೇಶಿಸಲಾಗಿದೆ. ಇಂಥ ಎರಡನೇ ರೈಲನ್ನು ಕಾರ್ಯಾಚರಣೆ ಮಾಡುವ ಸಂಬಂಧ ರೈಲ್ವೆ ಸದ್ಯದಲ್ಲೇ ನಿರ್ಧಾರ ಕೈಗೊಳ್ಳಲಿದೆ.
ಅಮೃತ್ ಭಾರತ್ ರೈಲುಗಳು ಹವಾನಿಯಂತ್ರಿತವಲ್ಲದ ರೈಲುಗಳಾಗಿದ್ದು, ಕುಳಿತುಕೊಳ್ಳುವ ಮತ್ತು ಸ್ಲೀಪರ್ ವ್ಯವಸ್ಥೆಯನ್ನು ಹೊಂದಿರುತ್ತದೆ. ವಿವಿಧ ನಗರಗಳನ್ನು ಸಂಪರ್ಕಿಸುವ ಉದ್ದೇಶದಿಂದ ರಾತ್ರಿ ಸಂಚರಿಸುವ ರೈಲುಗಳನ್ನು ಕಾರ್ಯಾಚರಣೆ ಮಾಡಲು ರೈಲ್ವೆ ನಿರ್ಧರಿಸಿದೆ.