ಭಾರತವು ಧರ್ಮಕೇಂದ್ರಿತ ದೇಶ, ಜಾತ್ಯತೀತತೆ ಯೂರೋಪಿಯನ್ ಪರಿಕಲ್ಪನೆ : ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ
ಆರ್.ಎನ್.ರವಿ | PTI
ಚೆನ್ನೈ: ಚರ್ಚ್ ಮತ್ತು ರಾಜರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಉದ್ಭವಿಸಿದ ಜಾತ್ಯತೀತತೆ ಯೂರೋಪಿಯನ್ ಪರಿಕಲ್ಪನೆಯಾಗಿದೆ. ಆದರೆ, ಭಾರತವು ಧರ್ಮಕೇಂದ್ರಿತ ದೇಶವಾಗಿದ್ದು, ಇಂತಹ ಯಾವುದೇ ಬಿಕ್ಕಟ್ಟಿರಲಿಲ್ಲ. ಹೀಗಾಗಿಯೇ ಆ ಪದವನ್ನು ಸಂವಿಧಾನದಲ್ಲಿ ಸೇರ್ಪಡೆ ಮಾಡಲಾಗಿರಲಿಲ್ಲ. ಬದಲಿಗೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೇರ್ಪಡೆ ಮಾಡಲಾಯಿತು ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಹೇಳಿದ್ದಾರೆ.
ರವಿವಾರ ಕನ್ಯಾಕುಮಾರಿಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಜನರಿಗೆ ಹಲವಾರು ವಂಚನೆಯನ್ನೆಸಗಲಾಗಿದ್ದು, ಈ ಪೈಕಿ ಜಾತ್ಯತೀತತೆ ಪದದ ತಪ್ಪು ವ್ಯಾಖ್ಯಾನ ಕೂಡಾ ಸೇರಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
“ಜಾತ್ಯತೀತತೆ ಎಂದರೇನು? ಇದು ಯೂರೋಪಿಯನ್ ಪರಿಕಲ್ಪನೆಯಾಗಿದ್ದು, ಭಾರತೀಯ ಪರಿಕಲ್ಪನೆಯಲ್ಲ. ಚರ್ಚ್ ಮತ್ತು ರಾಜರ ನಡುವೆ ದೀರ್ಘಕಾಲ ಬಿಕ್ಕಟ್ಟು ತಲೆದೋರಿದ್ದರಿಂದ ಯೂರೋಪ್ ನಲ್ಲಿ ಜಾತ್ಯತೀತತೆ ಪರಿಕಲ್ಪನೆ ಹುಟ್ಟಿತು” ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಸ್ವಾತಂತ್ರ್ಯದ ಸಂದರ್ಭದಲ್ಲಿ ಸಂವಿಧಾನದ ಕರಡನ್ನು ರಚಿಸುವಾಗ, ಸಂವಿಧಾನ ರಚನಾ ಸಭೆಯ ಎದುರು ಜಾತ್ಯತೀತತೆ ಕುರಿತ ಚರ್ಚೆ ಬಂದಿತ್ತು. ಆದರೆ, ಭಾರತವು ಧರ್ಮಕೇಂದ್ರಿತ ದೇಶವಾಗಿದ್ದುದರಿಂದ ಹಾಗೂ ಯೂರೋಪ್ ನಲ್ಲಿ ಆದಂತೆ ಇಲ್ಲಿ ಯಾವುದೇ ಬಿಕ್ಕಟ್ಟು ಇಲ್ಲದೆ ಇದ್ದುದರಿಂದ ಸಂವಿಧಾನ ರಚನಾ ಸಭೆಯು ಈ ಪ್ರಸ್ತಾವವನ್ನು ತಿರಸ್ಕರಿಸಿತ್ತು ಎಂದು ಅವರು ಹೇಳಿದ್ದಾರೆ.
ಸಂವಿಧಾನ ರಚನಾ ಸಭೆಯ ಚರ್ಚೆಗಳನ್ನು ಉಲ್ಲೇಖಿಸಿದ ಆರ್.ಎನ್.ರವಿ, ಭಾರತವು ಧರ್ಮಕೇಂದ್ರಿತ ದೇಶವಾಗಿದೆ ಎಂದು ಒತ್ತಿ ಹೇಳಿದರು. “ಧರ್ಮದೊಳಗೆ ಬಿಕ್ಕಟ್ಟು ಉದ್ಭವಿಸಲು ಹೇಗೆ ಸಾಧ್ಯ? ಧರ್ಮದಿಂದ ಭಾರತ ದೂರವಿರಲು ಹೇಗೆ ಸಾಧ್ಯ? ಅದು ಸಾಧ್ಯವಿಲ್ಲ! ಜಾತ್ಯತೀತತೆ ಯೂರೋಪಿಯನ್ ಪರಿಕಲ್ಪನೆ; ಅದು ಅಲ್ಲಿಯೇ ಇರಲಿ. ಭಾರತದಲ್ಲಿ ಜಾತ್ಯತೀತತೆಯ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಹೀಗಾಗಿಯೇ ಸಂವಿಧಾನದಲ್ಲಿ ಅದನ್ನು ಸೇರ್ಪಡೆ ಮಾಡಲಿಲ್ಲ” ಎಂದು ಅವರು ಪ್ರತಿಪಾದಿಸಿದ್ದಾರೆ.
“ದಶಕಗಳ ನಂತರ, 1975-77ರಲ್ಲಿ ತುರ್ತು ಪರಿಸ್ಥಿತಿ ಜಾರಿಗೊಂಡ ನಂತರ, ಓರ್ವ ಅಭದ್ರತೆಯ ಪ್ರಧಾನಿಯು ಕೆಲ ವಲಯದ ಜನರನ್ನು ಸಂತುಷ್ಟರನ್ನಾಗಿಸಲು ಸಂವಿಧಾನದಲ್ಲಿ ಜಾತ್ಯತೀತತೆ ಪದವನ್ನು ಸೇರ್ಪಡೆ ಮಾಡಿದರು” ಎಂದು ಅವರು ಆರೋಪಿಸಿದ್ದಾರೆ.