ವೀಸಾ ಷರತ್ತು ಉಲ್ಲಂಘನೆ | ಶ್ರೀಲಂಕಾದಿಂದ 15 ಭಾರತೀಯರು ಗಡಿಪಾರು

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ವೀಸಾ ಷರತ್ತುಗಳನ್ನು ಉಲ್ಲಂಘಿಸಿ ಶ್ರೀಲಂಕಾದಲ್ಲಿ ನೆಲೆಸಿದ್ದ 15 ಮಂದಿ ಭಾರತೀಯ ಪ್ರಜೆಗಳನ್ನು ಶ್ರೀಲಂಕಾ ಸರಕಾರ ಗಡಿಪಾರು ಮಾಡಿದೆ.
ಈ ಭಾರತೀಯ ಪ್ರಜೆಗಳ ಗುಂಪನ್ನು ಶನಿವಾರ ಚೆನ್ನೈಗೆ ಗಡಿಪಾರು ಮಾಡಲಾಗಿದೆ. ಜಾಫ್ನಾದಲ್ಲಿ ನಡೆದ ದಾಳಿಯ ಸಂದರ್ಭ ಇವರನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾದ ವಲಸೆ ಇಲಾಖೆಯ ಹೇಳಿಕೆಯನ್ನು ಉಲ್ಲೇಖಿಸಿ ಶ್ರೀಲಂಕಾದ ಡಿಜಿಟಲ್ ನ್ಯೂಸ್ ಸರ್ವೀಸ್ ತಿಳಿಸಿದೆ.
ವಲಸೆ ಇಲಾಖೆಯ ಮಹಾ ನಿಯಂತ್ರಣಾಧಿಕಾರಿ ನಿಲುಶಾ ಬಾಲಸೂರ್ಯ ಅವರ ಆದೇಶದಂತೆ ಈ ದಾಳಿ ನಡೆಸಲಾಗಿದೆ. ಈ ಭಾರತೀಯರು ಪ್ರವಾಸಿಗರ ವೀಸಾದಲ್ಲಿ ಶ್ರೀಲಂಕಾಕ್ಕೆ ಬಂದಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಇವರ ಪೈಕಿ 8 ಮಂದಿ ಜಾಫ್ನಾದಲ್ಲಿರುವ ಮರದ ಮಿಲ್ಲಿನಲ್ಲಿ ಕೆತ್ತನೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಐವರು ರೆಸ್ಟೋರೆಂಟ್ಗಳಲ್ಲಿ ಉದ್ಯೋಗಿಗಳಾಗಿದ್ದರು. ಇಬ್ಬರು ಧಾರ್ಮಿಕ ಪ್ರಚಾರಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಶ್ರೀಲಂಕಾದ ಡಿಜಿಟಲ್ ನ್ಯೂಸ್ ಸರ್ವೀಸ್ ತಿಳಿಸಿದೆ.
ಇಬ್ಬರು ಭಾರತೀಯರು ಮಾಚ್ 5ರಿಂದ ಮಾರ್ಚ್ 7ರ ವರೆಗೆ ಜಾಫ್ನಾದಲ್ಲಿ ಧಾರ್ಮಿಕ ಸಮಾವೇಶ ನಡೆಸಲು ಸಿದ್ಧತೆ ನಡೆಸುತ್ತಿದ್ದರು. ಈ ಪ್ರದೇಶದ ಹಿಂದೂ ಗುಂಪುಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಯಿತು ಎಂದು ಅದು ಹೇಳಿದೆ