ಶ್ರೀರಾಮ ಹಿಂದುಗಳಿಗೆ ಮಾತ್ರವಲ್ಲ, ಇಡೀ ಜಗತ್ತಿಗೇ ಸೇರಿದವರು: ಫಾರೂಕ್ ಅಬ್ದುಲ್ಲಾ
ರಾಮ ಮಂದಿರ ನಿರ್ಮಾಣಕ್ಕಾಗಿ ಶ್ರಮಿಸಿದವರನ್ನು ಅಭಿನಂದಿಸಿದ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ
ಫಾರೂಕ್ ಅಬ್ದುಲ್ಲಾ | Photo: PTI
ಪೂಂಛ್ (ಜ-ಕಾ): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಶ್ರಮಿಸಿದವರನ್ನು ಅಭಿನಂದಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು, ಭಾರತದಲ್ಲಿ ಇಂದು ಭ್ರಾತೃತ್ವವು ಕಡಿಮೆಯಾಗುತ್ತಿದೆ ಮತ್ತು ಅದನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಶನಿವಾರ ಇಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರವು ಸದ್ಯವೇ ಉದ್ಘಾಟನೆಗೊಳ್ಳಲಿದೆ. ಮಂದಿರ ನಿರ್ಮಾಣಕ್ಕಾಗಿ ಶ್ರಮಿಸಿದ ಎಲ್ಲರನ್ನು ಅಭಿನಂದಿಸಲು ನಾನು ಬಯಸುತ್ತೇನೆ. ಅದೀಗ ಸಿದ್ಧಗೊಂಡಿದೆ ಎಂದರು.
“ಭಗವಾನ ಶ್ರೀರಾಮ ಹಿಂದುಗಳಿಗೆ ಮಾತ್ರವಲ್ಲ, ಅವರು ಇಡೀ ಜಗತ್ತಿಗೇ ಸೇರಿದವರಾಗಿದ್ದಾರೆ ಎಂದು ಇಡೀ ದೇಶಕ್ಕೆ ಹೇಳಲು ನಾನು ಬಯಸುತ್ತೇನೆ. ಅವರು ವಿಶ್ವಾದ್ಯಂತ ಜನರಿಗೆ ದೇವರಾಗಿದ್ದಾರೆ. ಇದನ್ನು ಗ್ರಂಥಗಳಲ್ಲಿ ಬರೆಯಲಾಗಿದೆ. ಭಗವಾನ ಶ್ರೀರಾಮ ಭ್ರಾತೃತ್ವ, ಪ್ರೀತಿ, ಏಕತೆ ಮತ್ತು ಪರಸ್ಪರರಿಗೆ ನೆರವಾಗುವ ಸಂದೇಶವನ್ನು ನೀಡಿದ್ದಾರೆ. ಅವರು ಸಾರ್ವತ್ರಿಕ ಸಂದೇಶವನ್ನು ನೀಡಿದ್ದಾರೆ. ಇಂದು, ಈ ಮಂದಿರವು ಸದ್ಯವೇ ಉದ್ಘಾಟನೆಗೊಳ್ಳಲಿದ್ದು, ನಮ್ಮ ದೇಶದಲ್ಲಿ ಕ್ಷೀಣಿಸುತ್ತಿರುವ ಭ್ರಾತೃತ್ವವನ್ನು ಪುನರುಜ್ಜೀವನಗೊಳಿಸುವಂತೆ ಮತ್ತು ಭ್ರಾತೃತ್ವವನ್ನು ಕಾಯ್ದುಕೊಳ್ಳುವಂತೆ ದೇಶದ ಪ್ರತಿಯೊಬ್ಬರಿಗೂ ಹೇಳಲು ನಾನು ಬಯಸುತ್ತೇನೆ” ಎಂದು ಅಬ್ದುಲ್ಲಾ ಹೇಳಿದರು.