ಶ್ರೀರಾಮ ನನ್ನ ಹೃದಯದಲ್ಲಿದ್ದಾನೆ ಡಂಭಾಚಾರದ ಪ್ರದರ್ಶನದ ಅಗತ್ಯ ನನಗಿಲ್ಲ: ಕಪಿಲ್ ಸಿಬಲ್
ಕಪಿಲ್ ಸಿಬಲ್ | Photo: PTI
ಹೊಸದಿಲ್ಲಿ: ಭಗವಾನ್ ಶ್ರೀರಾಮಚಂದ್ರ ನನ್ನ ಹೃದಯದಲ್ಲಿದ್ದಾನೆ ಹಾಗೂ ರಾಮಭಕ್ತಿಯ ಡಂಬಾಚಾರದ ಪ್ರದರ್ಶನದ ಅಗತ್ಯ ತನಗಿಲ್ಲವೆಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ತಿಳಿಸಿದ್ದಾರೆ. ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿರಾ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ.
‘‘ಶ್ರೀರಾಮ ನನ್ನ ಹೃದಯದಲ್ಲಿದ್ದಾನೆ. ಭಕ್ತಿಯನ್ನು ಆಡಂಬರದೊಂದಿಗೆ ಪ್ರದರ್ಶಿಸುವ ಅಗತ್ಯ ನನಗಿಲ್ಲ. ನಾನಿದನ್ನು ಹೃದಯಪೂರ್ವಕವಾಗಿ ಹೇಳುತ್ತಿದ್ದೇನೆ. ಇಂತಹದೆಲ್ಲಾ ವಿಷಯಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಶ್ರೀರಾಮ ನನ್ನ ಹೃದಯದಲ್ಲಿದ್ದು, ನನ್ನ ಜೀವನ ಪಯಣದುದ್ದಕ್ಕೂ ಮಾರ್ಗದರ್ಶನ ಮಾಡಿದ್ದಾರೆ. ನಾನು ಸರಿಯಾದುದನ್ನು ಮಾಡಿದ್ದೇನೆ ಎಂಬುದು ಇದರಿಂದ ಮನನವಾಗುತ್ತದೆ’’ ಎಂದು ಸಿಬಲ್ ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇಡೀ ರಾಮ ಮಂದಿರ ನಿರ್ಮಾಣದ ವಿಷಯವು ಒಂದು ಆಷಾಡಭೂತಿತನವಾಗಿದೆ ಕೇಂದ್ರದ ಆಡಳಿತಾರೂಢ ಪಕ್ಷವಾದದ ಬಿಜೆಪಿಯು ನಡವಳಿಕೆ, ಚಾರಿತ್ರ್ಯವು ಶ್ರೀರಾಮನ ಆದರ್ಶಕ್ಕೆ ಅನುಗುಣವಾಗಿಲ್ಲವೆಂದು ಅವರು ಟೀಕಿಸಿದರು.
ಶ್ರೀರಾಮನ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಹೃಯಪೂರ್ವಕವಾಗಿ ಆಳವಡಿಸಿಕೊಳ್ಳಬೇಕಾಗಿದೆ ಹಾಗೂ ಆತನ ಸಿದ್ಧಾಂತಗಳನ್ನು ಅನುಸರಿಸಿ ಸಾಂವಿಧಾನಿಕ ಧ್ಯೇಯಗಳನ್ನು ಈಡೇರಿಸಿಕೊಳ್ಳಬೇಕಾಗಿದೆ ಎಂದವರು ಹೇಳಿದ್ದಾರೆ.