ಬಿ ಆರ್ ಎಸ್ ನ ಶ್ರೀಹರಿ, ಕಾವ್ಯಾ ಕಾಂಗ್ರೆಸ್ ಸೇರ್ಪಡೆ
ಬಿ ಆರ್ ಎಸ್ ನ ಶ್ರೀಹರಿ, ಕಾವ್ಯಾ | Photo: ANI
ಹೈದರಾಬಾದ್: ಬಿ ಆರ್ ಎಸ್ ನ ಹಾಲಿ ಶಾಸಕ ಹಾಗೂ ಮಾಜಿ ಸಚಿವ ಕದಿಯಮ್ ಶ್ರೀಹರಿ ಹಾಗೂ ಅವರ ಪುತ್ರಿ ಕದಿಯಮ್ ಕಾವ್ಯ ಅವರು ರವಿವಾರ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹಾಗೂ ಎಐಸಿಸಿ ಉಸ್ತುವಾರಿ ದೀಪ್ದಾಸ್ ಮುನ್ಶಿ ಹಾಗೂ ಡಿಸಿಸಿ ಅಧ್ಯಕ್ಷ ಸಿ. ರೋಹಿನ್ ರೆಡ್ಡಿ ಅವರ ಸಮ್ಮುಖದಲ್ಲಿ ಅವರು ಕಾಂಗ್ರೆಸ್ ಸೇರಿದರು.
ಕಾಂಗ್ರೆಸ್ ನಾಯಕರು ಈ ಹಿಂದೆ ಶ್ರೀಹರಿ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದರು. ವಿವಿಧ ಕಾರಣಗಳಿಂದಾಗಿ ಜನರು ಬಿ ಆರ್ ಎಸ್ ನಿಂದ ದೂರ ಹೋಗುತ್ತಿದ್ದಾರೆ.
ಆದುದರಿಂದ ಜನರ ಸೇವೆ ಮಾಡಲು ಹಾಗೂ ಕ್ಷೇತ್ರಕ್ಕಾಗಿ ಏನಾದರೂ ಮಾಡಲು ತಾನು ಕಾಂಗ್ರೆಸ್ ಸೇರುವ ನಿರ್ಧಾರ ತೆಗೆದುಕೊಂಡೆ ಎಂದು ಶ್ರೀಹರಿ ತಿಳಿಸಿದ್ದಾರೆ.
ಈ ಹಿಂದಿನ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಆಡಳಿತದ ವಿರುದ್ಧ ಭ್ರಷ್ಟಾಚಾರ ಹಾಗೂ ದೂರವಾಣಿ ಕದ್ದಾಲಿಕೆಯ ಇತ್ತೀಚೆಗಿನ ಆರೋಪವನ್ನು ಉಲ್ಲೇಖಿಸಿ ವಾರಂಗಲ್ ನ ಬಿ ಆರ್ ಎಸ್ ಅಭ್ಯರ್ಥಿಯಾಗಿದ್ದ ಕಾವ್ಯಾ ಅವರು ಪಕ್ಷ ತ್ಯಜಿಸುವ ನಿರ್ಧಾರ ಘೋಷಿಸಿದ್ದಾರೆ.
ಈ ಆರೋಪಗಳು ಪಕ್ಷದ ವರ್ಚಸ್ಸನ್ನು ಕಡಿಮೆ ಮಾಡಿದೆ ಎಂದು ಕಾವ್ಯಾ ಅವರು ಹೇಳಿದ್ದಾರೆ.