ಬಿಜೆಪಿ ಜತೆ ಮೈತ್ರಿ ಸಾಧ್ಯತೆ ತಿರಸ್ಕರಿಸಿದ ಸ್ಟಾಲಿನ್; ಆದರೆ ರಾಜನಾಥ್ ಸಿಂಗ್ ಬಗ್ಗೆ ಗುಣಗಾನ
Photo: PTI
ಚೆನ್ನೈ: ಬಿಜೆಪಿ ಜತೆ ಡಿಎಂಕೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ವಿರೋಧ ಪಕ್ಷಗಳ ಹೇಳಿಕೆಯನ್ನು "ಅಸಂಬದ್ಧ" ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಳ್ಳಿಹಾಕಿದ್ದಾರೆ. ಆದಾಗ್ಯೂ ಡಿಎಂಕೆ ಮಾಜಿ ನಾಯಕ ಎಂ.ಕರುಣಾನಿಧಿಯವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಅವರ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿರುವ ಕೇಂದ್ರ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಅವರನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.
"ಕಲೈಂಗಾರ್ ಸ್ಮಾರಕಕ್ಕೆ ಭೇಟಿ ನೀಡುವಂತೆ ನಾವು ರಾಜನಾಥ್ ಸಿಂಗ್ ಅವರನ್ನು ಒತ್ತಾಯಿಸಿರಲಿಲ್ಲ. ಆದರೆ ಅವರು ಭೇಟಿ ನೀಡಿ, ಇಡೀ ಸ್ಮಾರಕ ವೀಕ್ಷಿಸಿದರು. ಆದರೆ ಈ ಬಗೆಯ ಕ್ರಮವನ್ನು ಈ ಹಿಂದೆ ನಾವೆಂದೂ ನೋಡಿರಲಿಲ್ಲ" ಎಂದು ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ.
"ಸಭೆಯಲ್ಲಿ ಇರುವ ಪ್ರತಿಯೊಬ್ಬರೂ ಎದ್ದುನಿಂತು ಕಲೈಂಗರ್ಗೆ ಗೌರವ ನೀಡಬೇಕು ಎಂದು ಹೇಳುವ ಮೂಲಕ ಅವರು ನಮಗೆಲ್ಲರಿಗೂ ಅಚ್ಚರಿ ಮೂಡಿಸಿದರು. ಅದು ಅತ್ಯಂತ ಭಾವಪರವಶಗೊಳಿಸುವ ಸನ್ನಿವೇಶ. ಅವರು ನಮ್ಮ ಮಿತ್ರಪಕ್ಷಗಳ ಮುಖಂಡರಿಗಿಂತ ಚೆನ್ನಾಗಿ ಅಥವಾ ನಮ್ಮ ಡಿಎಂಕೆ ಮುಖಂಡರಿಗಿಂತ ಚೆನ್ನಾಗಿ ಕರುಣಾನಿಧಿ ಬಗ್ಗೆ ಮಾತನಾಡಿದರು" ಎಂದು ಬಣ್ಣಿಸಿದ್ದಾರೆ.
ಆದರೆ ಬಿಜೆಪಿ ಜತೆ ಮೈತ್ರಿಗೆ ಡಿಎಂಕೆ ಪ್ರಯತ್ನಿಸುತ್ತಿದೆ ಎಂಬ ಹೇಳಿಕೆಗಳನ್ನು ತಳ್ಳಿಹಾಕಿದ ಅವರು, "ನಾವು ರಾಜನಾಥ್ ಸಿಂಗ್ ಅವರನ್ನು ಆಹ್ವಾನಿಸಿದ ಮಾತ್ರಕ್ಕೆ, ಡಿಎಂಕೆ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುತ್ತದೆ ಎಂಬ ಸುಳ್ಳುಸುದ್ದಿ ಹರಡಲು ಆರಂಭಿಸಿದ್ದಾರೆ. ಬಿಜೆಪಿ ಜತೆ ರಹಸ್ಯ ಒಪ್ಪಂದ ಮಾಡಿಕೊಳ್ಳಬೇಕಾದ ಯಾವ ಅನಿವಾರ್ಯತೆಯೂ ನಮಗಿಲ್ಲ" ಎಂದು ಸ್ಪಷ್ಟಪಡಿಸಿದರು.