ಮಹಾ ಕುಂಭಮೇಳಕ್ಕೆ ಸ್ಟಾಲಿನ್, ಮಮತಾ, ಉಮರ್ ಅತಿಥಿಗಳು!
PC: x.com/VertigoWarrior
ಪ್ರಯಾಗ್ರಾಜ್: ಈ ವರ್ಷದ ಮಹಾ ಕುಂಭಮೇಳದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡನ್ನು ಆಹ್ವಾನಿಸಿರುವುದು ಅಚ್ಚರಿಗೆ ಕಾರಣವಾಗಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಮಂದಿ ಗಣ್ಯರನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗಿದೆ. ಈ ಮೆಗಾ ಕಾರ್ಯಕ್ರಮಕ್ಕೆ ರಾಜಕೀಯ ಹಿನ್ನೆಲೆಗಳನ್ನು ದಾಟಿ ಎಲ್ಲ ಪಕ್ಷಗಳಿಗೂ ಆಹ್ವಾನ ನೀಡಲಾಗಿದೆ.
ಅತಿಥಿಗಳ ಪಟ್ಟಿಯನ್ನು ಉತ್ತರ ಪ್ರದೇಶದ ಸಚಿವರಿಗೆ ನೀಡಲಾಗಿದ್ದು, ಇವರು ದೇಶಾದ್ಯಂತ ಎಲ್ಲ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳನ್ನು ಮಹಾಕುಂಭಕ್ಕೆ ಆಹ್ವಾನಿಸಲಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ದೆಹಲಿ ಸಿಎಂ ಅತಿಶಿ, ಪಂಜಾಬ್ ನ ಭಗವಂತ್ ಮಾನ್, ಜಮ್ಮು ಕಾಶ್ಮೀರ ಸಿಎಂ ಉಮರ್ ಅಬ್ದುಲ್ಲಾ ಸೇರಿದಂತೆ ಹಲವು ಮಂದಿ ಗಣ್ಯರನ್ನು ಕಾರ್ಯಕ್ರಮಕ್ಕೆ ಆಮಂತ್ರಿಸಲಾಗುತ್ತಿದೆ.
ಮಹಾಕುಂಭ ಮೇಳ 12 ವರ್ಷಗಳಲ್ಲಿ ನಾಲ್ಕು ಬಾರಿ ಕ್ರಮವಾಗಿ ಹರಿದ್ವಾರ, ಉಜ್ಜಯಿನಿ, ನಾಸಿಕ್ ಮತ್ತು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತದೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ಪ್ರಯಾಗ್ ರಾಜ್ ನಲ್ಲಿ 2025ರ ಜನವರಿ 13 ರಿಂದ ಫೆಬ್ರುವರಿ 26ರವರೆಗೆ ಈ ಬಾರಿಯ ಮಹಾಕುಂಭ ಮೇಳ ಆಯೋಜನೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಈ ತಿಂಗಳ 13ರಂದು ಹೊಸದಾಗಿ ರಚನೆಯಾದ ಮಹಾಕುಂಭ ಜಿಲ್ಲೆ ಮತ್ತು ಪ್ರಯಾಗ್ ರಾಜ್ ಗೆ ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸುವರು ಹಾಗೂ ಪ್ರಯಾಗ್ ರಾಜ್ - ವಾರಾಣಾಸಿ ಮೇಲ್ದರ್ಜೆಗೇರಿಸಲಾದ ರೈಲ್ವೆ ಹಳಿ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡುವರು.