ರಾಜ್ಯ ಸಭೆ ಚುನಾವಣೆ | ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಎನ್ಸಿಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ
ಸುನೇತ್ರಾ ಪವಾರ್
ಮುಂಬೈ : ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ರಾಜ್ಯಸಭೆ ಚುನಾವಣೆಗೆ ಎನ್ಸಿಪಿಯ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸುನೇತ್ರಾ ಪವಾರ್ ಅವರು ಬಾರಾಮತಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ಅಲ್ಲಿ ಅವರ ನಾದಿನಿ ಸುಪ್ರಿಯಾ ಸುಳೆ ಅವರು ನಿರಂತರ ನಾಲ್ಕನೇ ಬಾರಿ ಜಯ ಗಳಿಸಿದ್ದರು.
‘‘ರಾಜ್ಯ ಸಭಾ ಚುನಾವಣೆಯಲ್ಲಿ ಸುನೇತ್ರಾ ಪವಾರ್ ಅವರನ್ನು ಕಣಕ್ಕಿಳಿಸಲು ಎನ್ಸಿಪಿ ನಿರ್ಧರಿಸಿದೆ. ನಾನು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕನಾಗಿದ್ದೆ. ಆದರೆ, ಬುಧವಾರ ಸಂಜೆ ನಡೆದ ಸಭೆಯಲ್ಲಿ ಪಕ್ಷದ ನಾಯಕರು ಅವರ ಹೆಸರನ್ನು ಅಂತಿಮಗೊಳಿಸಿದರು’’ ಎಂದು ರಾಜ್ಯ ಸಚಿವ ಹಾಗೂ ಎನ್ಸಿಪಿಯ ಹಿರಿಯ ನಾಯಕ ಛಗನ್ ಬುಜಬಲ್ ಅವರು ಇಲ್ಲಿ ಹೇಳಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವುದರ ಬಗ್ಗೆ ನಿರಾಶೆಯಾಗಿದೆಯೇ ಎಂದು ಪ್ರಶ್ನಿಸಿದಾಗ ಭುಜಬಲ್ ಅವರು, ‘‘ಪಕ್ಷದ ನಿರ್ಧಾರವನ್ನು ಪ್ರತಿಯೊಬ್ಬರು ಸ್ವಾಗತಿಸಬೇಕು. ನಾನು ಸ್ವತಂತ್ರ ವ್ಯಕ್ತಿಯಲ್ಲ. ಬದಲಾಗಿ ಪಕ್ಷದ ಕಾರ್ಯಕರ್ತ ಹಾಗೂ ನಾಯಕ’’ ಎಂದಿದ್ದಾರೆ.
ಅಸ್ಸಾಂ, ಬಿಹಾರ್, ಮಹಾರಾಷ್ಟ್ರದಲ್ಲಿ ತಲಾ 2 ಹಾಗೂ ಹರ್ಯಾಣ, ಮಧ್ಯಪ್ರದೇಶ, ರಾಜಸ್ಥಾನ, ತ್ರಿಪುರಾದಲ್ಲಿ ತಲಾ 1 ಸೇರಿದಂತೆ ರಾಜ್ಯಸಭೆಯಲ್ಲಿ 10 ಸ್ಥಾನಗಳು ಇವೆ ಎಂದು ರಾಜ್ಯಸಭೆ ಕಾರ್ಯಾಲಯ ಅಧಿಸೂಚಿಸಿದೆ.