ರಾಜ್ಯಗಳು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವಾಗ ಆಯ್ಕೆ ಮಾಡಿಕೊಳ್ಳುವಂತಿಲ್ಲ, ಅದು ತುಷ್ಟೀಕರಣಕ್ಕೆ ಕಾರಣವಾಗುತ್ತದೆ: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | Photo : PTI
ಹೊಸದಿಲ್ಲಿ: ರಾಜ್ಯಗಳು ಒಳಮೀಸಲಾತಿ ನೀಡಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಉಪವರ್ಗೀಕರಿಸಬಹುದೇ ಎನ್ನುವುದನ್ನು ಪರಿಶೀಲಿಸುತ್ತಿರುವ ಸರ್ವೋಚ್ಚ ನ್ಯಾಯಾಲಯವು, ರಾಜ್ಯ ಸರಕಾರಗಳು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವಾಗ ಆಯ್ಕೆ ಮಾಡಿಕೊಳ್ಳುವಂತಿಲ್ಲ, ಅದು ತುಷ್ಟೀಕರಣದ ಅಪಾಯಕಾರಿ ಪ್ರವೃತ್ತಿಗೆ ಕಾರಣವಾಗುತ್ತದೆ ಎಂದು ಹೇಳಿದೆ.
ಇ.ವಿ.ಚಿನ್ನಯ್ಯ ವಿರುದ್ಧ ಆಂಧ್ರಪ್ರದೇಶ ಪ್ರಕರಣದಲ್ಲಿ ಐವರು ನ್ಯಾಯಾಧೀಶರ ಸಂವಿಧಾನ ಪೀಠದ 2004ರ ತೀರ್ಪಿನ ಪುನರ್ಪರಿಶೀಲನೆಗೆ ಉಲ್ಲೇಖಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ. ಎಸ್ಸಿ ಮತ್ತು ಎಸ್ಟಿಗಳು ಏಕರೂಪದ ಗುಂಪುಗಳಾಗಿವೆ, ಹೀಗಾಗಿ ಈ ಗುಂಪುಗಳಲ್ಲಿಯ ಹೆಚ್ಚು ವಂಚಿತ ಮತ್ತು ದುರ್ಬಲ ಜಾತಿಗಳಿಗೆ ಒಳಮೀಸಲಾತಿಯನ್ನು ಕಲ್ಪಿಸಲು ರಾಜ್ಯಗಳು ಅವುಗಳನ್ನು ಇನ್ನಷ್ಟು ಉಪವರ್ಗೀಕರಿಸುವಂತಿಲ್ಲ ಎಂದು ಸದ್ರಿ ತೀರ್ಪು ಎತ್ತಿ ಹಿಡಿದಿತ್ತು.
ರಾಜ್ಯಗಳು ಅತ್ಯಂತ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯಗಳನ್ನು ಒದಗಿಸುವಾಗ ಇತರರನ್ನು ಹೊರಗಿಡುವಂತಿಲ್ಲ ಎಂದು ನ್ಯಾ.ಡಿ.ವೈ.ಚಂದ್ರಚೂಡ್ ನೇತೃತ್ವದ ಏಳು ನ್ಯಾಯಾಧೀಶರ ಸಂವಿಧಾನ ಪೀಠವು ಗುರುವಾರ ವಿಚಾರಣೆ ಸಂದರ್ಭದಲ್ಲಿ ಹೇಳಿತು.
‘ಉದಾಹರಣೆಗೆ,ಹಲವಾರು ಹಿಂದುಳಿದ ವರ್ಗಗಳಿದ್ದರೆ ಸರಕಾರವು ಕೇವಲ ಎರಡನ್ನು ಆಯ್ಕೆ ಮಾಡಬಹುದೇ? ಹೊರಗಿಡಲ್ಪಟ್ಟವರು ತಾವು ಹಿಂದುಳಿದಿರುವಿಕೆಯ ಎಲ್ಲ ಮಾನದಂಡಗಳನ್ನು ಪೂರೈಸಿದ್ದೇವೆ ಎಂಬ ಕಾರಣವನ್ನು ನೀಡಿ ಸಂವಿಧಾನದ ವಿಧಿ 14ರಡಿ ತಮ್ಮ ವರ್ಗೀಕರಣವನ್ನು ಯಾವಾಗಲೂ ಪ್ರಶ್ನಿಸಬಹುದು. ನಾವು ಹಿಂದುಳಿದಿರುವಿಕೆಯ ಪ್ರಮಾಣವನ್ನು ನೋಡಿ ಜಾತಿಯನ್ನು ವರ್ಗೀಕರಿಸಬಹುದು ಎಂದು ಸರಕಾರವೂ ಪ್ರತಿಪಾದಿಸಬಹುದು. ಅತ್ಯಂತ ಹಿಂದುಳಿದವರಿಗೆ ಮೀಸಲಾತಿಯನ್ನು ಒದಗಿಸಲು ನಾವು ಬಯಸಿದ್ದೇವೆ ಎಂದೂ ಅದು ಹೇಳಬಹುದು’ ಎಂದು ಹೇಳಿದ ಪೀಠವು, ‘ಆದರೆ ಅತ್ಯಂತ ಹಿಂದುಳಿದವರಿಗೆ ಮೀಸಲಾತಿ ಸೌಲಭ್ಯಗಳನ್ನು ಒದಗಿಸುವಾಗ ನೀವು ಇತರರನ್ನು ಹೊರಗಿಡಲು ಸಾಧ್ಯವಿಲ್ಲ, ಅದು ತುಷ್ಟೀಕರಣದ ಅಪಾಯಕಾರಿ ಪ್ರವೃತ್ತಿಯಾಗುತ್ತದೆ. ಕೆಲವು ರಾಜ್ಯ ಸರಕಾರಗಳು ಕೆಲವು ಜಾತಿಗಳನ್ನು ಆಯ್ದುಕೊಂಡರೆ ಇತರ ಸರಕಾರಗಳು ಬೇರೆ ಕೆಲವು ಜಾತಿಗಳನ್ನು ಆಯ್ದುಕೊಳ್ಳುತ್ತವೆ. ಇದರಲ್ಲಿ ಜನಪ್ರಿಯ ರಾಜಕೀಯವನ್ನು ಆಡಬಾರದು. ಮಾನದಂಡಗಳನ್ನು ರೂಪಿಸುವ ಮೂಲಕ ನಾವದನ್ನು ಸರಿಹೊಂದಿಸಬೇಕಿದೆ’ ಎಂದು ಹೇಳಿತು.
ಕೇಂದ್ರ, ರಾಜ್ಯಗಳು ಮತ್ತು ಇತರರ ಅಹವಾಲುಗಳನ್ನು ಆಲಿಸಿದ ಬಳಿಕ ತನ್ನ ತೀರ್ಪನ್ನು ಕಾಯ್ದಿರಿಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ವಿಕ್ರಮನಾಥ, ಬೇಲಾ ಎಂ.ತ್ರಿವೇದಿ, ಪಂಕಜಮಿತ್ತಲ್, ಮನೋಜ್ ಮಿಶ್ರಾ ಮತ್ತು ಸತೀಶಚಂದ್ರ ಮಿಶ್ರಾ ಅವರನ್ನೂ ಒಳಗೊಂಡ ಪೀಠವು, ಮೀಸಲಾತಿಯನ್ನು ನೀಡುವುದು ಮತ್ತು ಸಾಮಾಜಿಕ ಹಿಂದುಳಿದಿರುವಿಕೆಯನ್ನು ನಿವಾರಿಸುವುದು ಸರಕಾರದ ಕೆಲಸವಾಗಿದೆ. ಸರಕಾರವು ಹಾಗೆ ಮಾಡುವಾಗ ವರ್ಗವೊಂದು ಎದುರಿಸುತ್ತಿರುವ ಅಸಮಾನತೆಗಳನ್ನು ಹೋಗಲಾಡಿಸಲು ಬಯಸಿದರೆ ಅದು ಆ ಕೆಲಸವನ್ನು ಮಾಡಬಹುದು ಎಂದು ತಿಳಿಸಿತು.
ಉಪವರ್ಗೀಕರಣವು ಒಂದು ಜಾತಿಯೊಳಗಿನ ಇತರರೂ ಮುಂದೆ ಬರಲು ನೆರವಾಗುತ್ತದೆ,ಇಲ್ಲದಿದ್ದರೆ ಒಂದು ವಿಭಾಗವು ಮಾತ್ರ ಸೌಲಭ್ಯಗಳನ್ನು ಪಡೆದುಕೊಳ್ಳುವುದನ್ನು ಮುಂದುವರಿಸುತ್ತದೆ ಎಂದೂ ಸರ್ವೋಚ್ಚ ನ್ಯಾಯಾಲಯವು ಹೇಳಿತು.