ಕುಂಭ ಮೇಳಕ್ಕೆ ಭೇಟಿ ನೀಡಿದ ಸ್ಟೀವ್ ಜಾಬ್ಸ್ ಪತ್ನಿ

PC: x.com/ndtv
ಪ್ರಯಾಗ್ ರಾಜ್: ಆರೋಗ್ಯ ಕಳಕಳಿಯ ದೃಷ್ಟಿಯಿಂದ ಮಹಾಕುಂಭ ಮೇಳದ ಮೊದಲ ದಿನ ಭಾಗವಹಿಸಲು ಸಾಧ್ಯವಾಗದೇ ಇದ್ದ ಆ್ಯಪಲ್ ಸಹಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಕುಂಭಮೇಳದಲ್ಲಿ ಭಾನುವಾರ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಾರೆ.
ಅಮೆರಿಕದ ಕೋಟ್ಯಧಿಪತಿ ಲಾರೆನ್ ಪೊವೆಲ್ ಜಾಬ್ಸ್ ಅವರನ್ನು ಕರೆತಂದ ಭೂತಾನ್ ಏರ್ವೇಸ್ ವಿಮಾನ ಇತ್ತೀಚೆಗೆ ಪ್ರಯಾಗ್ರಾಜ್ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು. ಕುಂಭಮೇಳದಲ್ಲಿ ಭಾಗವಹಿಸಿದ ಬಳಿಕ ಅವರು ಅದೇ ವಿಮಾನದಲ್ಲಿ ಭೂತಾನ್ ಗೆ ತೆರಳಿದರು. ಇದು 93 ವರ್ಷಗಳ ಇತಿಹಾಸದಲ್ಲಿ ಪ್ರಯಾಗ್ರಾಜ್ನ ಮೊದಲ ವಿದೇಶಿ ವಿಮಾನ ಎನಿಸುವ ಮೂಲಕ ವಿಮಾನ ನಿಲ್ದಾಣದ ಐತಿಹಾಸಿಕ ಮೈಲುಗಲ್ಲು ಎನಿಸಿದೆ.
1911ರಲ್ಲಿ ಭಾರತದಲ್ಲಿ ಹೆನ್ರಿ ಪಿಕ್ವಿಟ್ ವಾಣಿಜ್ಯ ವಿಮಾನಯಾನಕ್ಕೆ ಚಾಲನೆ ನೀಡಿದ್ದರು. ಅಲಹಾಬಾದ್ ನಿಂದ ನೈಲಿಗೆ ಈ ವಿಮಾನ ತೆರಳಿತ್ತು. 1931ರ ವೇಳೆಗೆ ಅಲಹಾಬಾದ್ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲಾಯಿತು. ಈ ಮೂಲಕ ಇದು ಭಾರತದ ಮೊಟ್ಟಮೊದಲ ಅಂತರಾಷ್ಟ್ರೀಯ ವಿಮಾನನಿಲ್ದಾಣ ಎನಿಸಿದ್ದು, 1932ರವರೆಗೆ ಲಂಡನ್ ಗೆ ವಿಮಾನಗಳು ಹಾರಾಡುತ್ತಿದ್ದವು.
1974ರ ಫೆಬ್ರುವರಿ 23ರಂದು ತಮ್ಮ ಬಾಲ್ಯಸ್ನೇಹಿತ ಟಿಮ್ ಬ್ರೌನ್ಗೆ ಬರೆದ ಪತ್ರದಲ್ಲಿ ಜಾಬ್ಸ್ ಕುಂಭಮೇಳದಲ್ಲಿ ಭಾಗವಹಿಸುವ ಇಚ್ಛೆ ವ್ಯಕ್ತಪಡಿಸಿದ್ದರು. "ಏಪ್ರಿಲ್ 1ರಿಂದ ಆರಂಭವಾಗುವ ಕುಂಭ ಮೇಳಕ್ಕಾಗಿ ಭಾರತಕ್ಕೆ ತೆರಳಲು ಬಯಸಿದ್ದೇನೆ. ಇನ್ನೂ ನಿರ್ಧಿಷ್ಟವಲ್ಲದಿದ್ದರೂ ಮಾರ್ಚ್ ಕೊನೆಗೆ ಭಾರತಕ್ಕೆ ತೆರಳುತ್ತಿದ್ದೇನೆ ಎಂದು ಹೇಳಿ, ಶಾಂತಿ ಸ್ಟೀವ್ ಜಾಬ್ಸ್ ಎಂದು ಪತ್ರ ಕೊನೆಗೊಳಿಸಿದ್ದರು. ಈ ಭಾವನಾತ್ಮಕ ಕ್ಷಣದಲ್ಲಿ ಹಲವು ಬಾರಿ ಅತ್ತಿದ್ದಾಗಿ ಜಾಬ್ಸ್ ಹೇಳಿದ್ದರು. ಈ ಪತ್ರ ಇತ್ತೀಚೆಗೆ 4.32 ಕೋಟಿ ರೂಪಾಯಿಗೆ ಹರಾಜಾಗಿತ್ತು.
ಜಾಬ್ಸ್ ಅವರ ಆಧ್ಯಾತ್ಮಿಕ ಪಯಣ ಉತ್ತರಾಖಂಡದ ನೀಮ್ ಕರೋಲಿ ಆಶ್ರಮಕ್ಕೆ ಅವರನ್ನು ಕರೆತಂದಿತು. ಜಾಬ್ಸ್ ಆಗಮನಕ್ಕೆ ಒಂದು ವರ್ಷ ಮುನ್ನವೇ ಅಲ್ಲಿನ ಸಂತರು ಕಾಲವಾದರೂ, ಅವರ ಬೋಧನೆಗಳು ಜಾಬ್ಸ್ ಮೇಲೆ ಆಳವಾದ ಪರಿಣಾಮ ಬೀರಿದ್ದವು.