ಭೋಪಾಲ ಅನಿಲ ದುರಂತದ ತ್ಯಾಜ್ಯ ವಿಲೇವಾರಿ ಪೀತಾಂಪುರದ ದಹನ ಘಟಕದ ಮೇಲೆ ಕಲ್ಲು ತೂರಾಟ
PC : PTI
ಧಾರ್ : ಭೋಪಾಲ ಅನಿಲ ದುರಂತಕ್ಕೆ ನಂಟು ಹೊಂದಿದ ಯೂನಿಯನ್ ಕಾರ್ಬೈಡ್ನ 337 ಟನ್ ತ್ಯಾಜ್ಯವನ್ನು ದಹಿಸಲು ಪ್ರಸ್ತಾವಿತ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪೀತಾಂಪುರದಲ್ಲಿರುವ ಕಾರ್ಖಾನೆಗೆ ಗುಂಪೊಂದು ಶನಿವಾರ ಕಲ್ಲು ತೂರಾಟ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೀತಾಂಪುರ ಕಾರ್ಖಾನೆಯ ಘಟಕದ ಗೇಟಿಗೆ 100ರಿಂದ 150 ಜನರಿದ್ದ ಗುಂಪು ಕಲ್ಲು ತೂರಾಟ ನಡೆಸಿತು ಎಂದು ಪೀತಾಂಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಓಂ ಪ್ರಕಾಶ್ ಅಹಿರ್ ತಿಳಿಸಿದ್ದಾರೆ.
ಈ ಕಲ್ಲು ತೂರಾಟದ ಹಿಂದಿರುವವರನ್ನು ಗುರುತಿಸಲು ಹಾಗೂ ಅವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ಅಹಿರ್ ಹೇಳಿದ್ದಾರೆ.
ಪೀತಾಂಪುರ ಬಚಾವೊ ಸಮಿತಿ ಬಂದ್ಗೆ ಕರೆ ನೀಡಿದ ನಡುವೆ ಈ ತ್ಯಾಜ್ಯ ವಿಲೇವಾರಿ ಯೋಜನೆಯ ವಿರುದ್ಧ ಪಟ್ಟಣದಲ್ಲಿ ಪ್ರತಿಭಟನೆ ನಡೆದ ದಿನದ ಬಳಿಕ ಈ ಘಟನೆ ನಡೆದಿದೆ.
ತ್ಯಾಜ್ಯವನ್ನು ದಹಿಸಲು ಸಿದ್ಧತೆ ನಡೆಸುತ್ತಿರುವ ರಾಮ್ಕಿ ಗ್ರೂಪ್ಸ್ ಇಂಡಸ್ಟ್ರೀಯಲ್ ವೇಸ್ಟ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ಗೆ 500-600 ಜನರ ಗುಂಪು ಶುಕ್ರವಾರ ರ್ಯಾಲಿ ನಡೆಸಿತ್ತು. ಆದರೆ, ಪೊಲೀಸರು ಅವರನ್ನು ಚದುರಿಸಿದ್ದರು.
ಗಂಟೆಗಳ ಬಳಿಕ ಜಿಲ್ಲಾಡಳಿತ ಕಾರ್ಖಾನೆಯ ಘಟಕದ ಆವರಣದ ಸುತ್ತಮುತ್ತ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್)ಯ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತ್ತು.