ಸುನಿತಾ ವಿಲಿಯಮ್ಸ್ರ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯಿಂದ ಕೇಳಿಸಿದ ನಿಗೂಢ ಶಬ್ಧ : ಗಗನಯಾತ್ರಿಯಿಂದ ಮಾಹಿತಿ ರವಾನೆ
PC : Nasa
ಹೊಸದಿಲ್ಲಿ : ಬಾಹ್ಯಾಕಾಶದಲ್ಲಿ ತಾಂತ್ರಿಕ ದೋಷಗಳಿಂದ ಉಳಿದುಕೊಂಡಿರುವ ಸುನಿತಾ ವಿಲಿಯಮ್ಸ್ ಇರುವ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯ ಒಳಗಿನಿಂದ ವಿಚಿತ್ರ ಶಬ್ದ ಕೇಳಿಸಿರುವ ಬಗ್ಗೆ ಗಗನಯಾತ್ರಿ ಬುಚ್ ವಿಲ್ಮೋರ್ ನಾಸಾಕ್ಕೆ ಮಾಹಿತಿಯನ್ನು ನೀಡಿದ್ದು, ನಾಸಾದ ವಿಜ್ಞಾನಿಗಳಿಗೆ ಶಬ್ಧದ ಮೂಲವನ್ನು ಕಂಡು ಹಿಡಿಯುವ ಸವಾಲು ಎದುರಾಗಿದೆ
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ(ISS) ಅನಿರೀಕ್ಷಿತ ಬೆಳವಣಿಗೆಯೊಂದನ್ನು ನಾಸಾ ಗಗನಯಾತ್ರಿ ಬುಚ್ ವಿಲ್ಮೋರ್ ಬೋಯಿಂಗ್ ಗಮನಿಸಿದ್ದು, ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯಿಂದ ನಿಗೂಢವಾದ ಶಬ್ಧವನ್ನು ಕೇಳಿರುವುದಾಗಿ ಹೇಳಿಕೊಂಡಿದ್ದಾರೆ.
ತಾಂತ್ರಿಕ ಸಮಸ್ಯೆಯಿಂದ ಸೆ.6ರಂದು ಗಗನಯಾತ್ರಿಗಳಿಲ್ಲದೆ ಕ್ಯಾಪ್ಸೂಲ್ನ್ನು ಪ್ರತ್ಯೇಕ ಮಾಡಲು ಮತ್ತು ಭೂಮಿಗೆ ವಾಪಾಸ್ಸು ತರಲು ತಯಾರಿ ನಡೆಸುತ್ತಿರುವ ಮಧ್ಯೆಯೇ ಈ ವಿಚಿತ್ರ ಘಟನೆ ಸಂಭವಿಸಿದೆ.
ಸ್ಟಾರ್ಲೈನರ್ನ ತಾಂತ್ರಿಕ ಸಮಸ್ಯೆಗಳಿಂದಾಗಿ ಸಹ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಜೊತೆಗೆ ಬಾಹ್ಯಾಕಾಶದಲ್ಲಿ ಸಿಲುಕಿರುವ ವಿಲ್ಮೋರ್, ನಿಗೂಢ ಶಬ್ದಗಳನ್ನು ಕೇಳಿರುವ ಬಗ್ಗೆ ತಿಳಿಸಲು ಹೂಸ್ಟನ್ನಲ್ಲಿರುವ ನಾಸಾದ ಮಿಷನ್ ಕಂಟ್ರೋಲನ್ನು ಸಂಪರ್ಕಿಸಿದ್ದಾರೆ.
ವಿಲ್ಮೋರ್ ತನ್ನ ಧ್ವನಿಮುದ್ರಿತ ಸಂಭಾಷಣೆಯಲ್ಲಿ ಶಬ್ದವು ಪುನರಾವರ್ತನೆಯಾಗುವುದನ್ನು ಗಮನಿಸಿದ್ದಾರೆ, ಜೊತೆಗೆ ಶಬ್ಧವು ಜಲಾಂತರ್ಗಾಮಿ ನಿಗೂಢ ಶಬ್ಧವನ್ನು ನೆನಪಿಸುತ್ತಿದೆ ಮತ್ತು ಬಾಹ್ಯಾಕಾಶ ನೌಕೆಯನ್ನು ಹೊರಗಿನಿಂದ ಟ್ಯಾಪಿಂಗ್ ಮಾಡುವ ಧ್ವನಿಯಂತಿದೆ ಎಂದು ವಿವರಿಸಿದ್ದಾರೆ.
Starliner crew reports hearing strange "sonar like noises" emanating from their craft. This is the real audio of it: pic.twitter.com/xzHTMvB7uq
— SpaceBasedFox . (@SpaceBasedFox) September 1, 2024
ಗಗನಯಾತ್ರಿಯು ಸ್ಟಾರ್ಲೈನರ್ನ ಆಂತರಿಕ ಸ್ಪೀಕರ್ಗೆ ಮೈಕ್ರೊಫೋನ್ನ್ನು ಹಿಡಿದಿಟ್ಟುಕೊಂಡು, ವಿಲಕ್ಷಣವಾದ ಶಬ್ದವನ್ನು ಕೇಳಲು ಅವಕಾಶ ಮಾಡಿಕೊಟ್ಟಿದ್ದಾರೆ. ನಾಸಾದ ಮಿಷನ್ ಕಂಟ್ರೋಲ್ ನಿಗೂಢ ಧ್ವನಿಯನ್ನು ದೃಢಪಡಿಸಿದೆ. ಶಬ್ಧವು ನಾಡಿ ಮಿಡಿತದಂತೆ ಇದೆ ಮತ್ತು ನಿಗೂಢವಾಗಿದೆ ಎಂದು ಹೇಳಿಕೊಂಡಿದೆ. ಇದಲ್ಲದೆ ಶಬ್ಧವು ನಿಗೂಢವಾಗಿಯೇ ಉಳಿದಿದ್ದು ನಾಸಾ ಎಂಜಿನಿಯರ್ಗಳನ್ನು ಗೊಂದಲಕ್ಕೀಡುಮಾಡಿದೆ.
ಈ ಬೆಳವಣಿಗೆಯು ಈಗಾಗಲೇ ಸಂಕೀರ್ಣವಾದ ಸ್ಟಾರ್ಲೈನರ್ ಮಿಷನ್ಗೆ ಮತ್ತೊಂದು ಸವಾಲನ್ನು ಉಂಟು ಮಾಡಿದೆ. ಥ್ರಸ್ಟರ್ ವೈಫಲ್ಯಗಳು ಮತ್ತು ಹೀಲಿಯಂ ಸೋರಿಕೆಗಳು ಸೇರಿದಂತೆ ಬಾಹ್ಯಾಕಾಶ ನೌಕೆಯ ವಿವಿಧ ತಾಂತ್ರಿಕ ಸಮಸ್ಯೆಗಳಿಂದಾಗಿ ವಿಲ್ಮೋರ್ ಮತ್ತು ವಿಲಿಯಮ್ಸ್ ಸುಮಾರು ಮೂರು ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಉಳಿಯುವಂತಾಗಿದೆ. ಈ ಮೊದಲು ಎಂಟು ದಿನಗಳ ಕಾಲ ಮಾತ್ರ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ಇರಲಿದ್ದಾರೆ ಎಂದು ಹೇಳಲಾಗಿತ್ತು.
ಇನ್ನು ನಿಗೂಢವಾದ ಶಬ್ದಗಳು ಆನ್ಲೈನ್ನಲ್ಲಿ ವ್ಯಾಪಕವಾದ ಊಹಾಪೋಹಗಳನ್ನೇ ಹುಟ್ಟುಹಾಕಿವೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹಾಸ್ಯಮಯವಾಗಿ ಇದನ್ನು ಬಣ್ಣಿಸಿದ್ದು, ವೈಜ್ಞಾನಿಕ ಕಾಲ್ಪನಿಕ ಸನ್ನಿವೇಶಗಳಿಗೆ ಸಮಾನಾಂತರವಾಗಿ ವಿವರಿಸಿದ್ದಾರೆ. ಒಂದು ಕಡೆ ಸ್ಟಾರ್ಲೈನರ್ನ ವಾಪಾಸ್ಸಾತಿಗೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, ಇನ್ನೊಂದು ಕಡೆ ನಾಸಾ ಎಂಜಿನಿಯರ್ಗಳು ಈ ನಿಗೂಢ ಶಬ್ದಗಳ ಮೂಲವನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.