29 ಜನರಿಗೆ ಕಚ್ಚಿದ ನಾಯಿಯಲ್ಲಿ ರೇಬೀಸ್ ಸೋಂಕು ಧೃಡ
Photo credit: indiatoday.in
ಚೆನ್ನೈ: ಚೆನ್ನೈ ನಗರದ ರಾಯಪುರಂ ಎಂಬಲ್ಲಿ ಒಂದು ಗಂಟೆಯೊಳಗೆ 29 ಜನರನ್ನು ಕಚ್ಚಿದ ನಾಯಿಯಲ್ಲಿ ರೇಬೀಸ್ ಸೋಂಕು ಪತ್ತೆಯಾಗಿದೆ.
ನವೆಂಬರ್ 22 ರಂದು ಘಟನೆ ನಡೆದಿದ್ದು, ಸಾರ್ವಜನಿಕರ ಮೇಲೆ ದಾಳಿ ನಡೆಸಿದ್ದ ಬೀದಿ ನಾಯಿಯನ್ನು ಹೊಡೆದು ಕೊಲ್ಲಲಾಗಿತ್ತು.
ಮೃತ ನಾಯಿಯ ಮಾದರಿಯಲ್ಲಿ ರೇಬೀಸ್ ಪತ್ತೆಯಾಗಿರುವುದನ್ನು ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ನಾಯಿ ಕಡಿತದಿಂದ ಗಾಯಗೊಂಡ 5 ಮಕ್ಕಳು ಸೇರಿದಂತೆ 29 ಜನರನ್ನು ಸರ್ಕಾರಿ ಸ್ಟಾನ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಆಂಟಿ ರೇಬಿಸ್ ಲಸಿಕೆಯನ್ನು ಆರಂಭಿಕ ಡೋಸ್ ನೀಡಲಾಗಿದೆ.
ನಾಯಿ ದಾಳಿಯಿಂದ ಗಾಯಗೊಂಡವರ ಆರೋಗ್ಯ ಸ್ಥಿತಿಯನ್ನು ಆಸ್ಪತ್ರೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ.
ರೋಗಿಗಳು ರೇಬೀಸ್ ತಡೆಗಟ್ಟುವ ಲಸಿಕೆಗಳನ್ನು ಐದು ಹಂತಗಳಲ್ಲಿ ಪಡೆಯಲಿದ್ದಾರೆ.
ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಅಧಿಕಾರಿಗಳು ಉಳಿದ ಬೀದಿ ನಾಯಿಗಳ ಮೇಲೂ ರೇಬಿಸ್ ಪರೀಕ್ಷೆ ನಡೆಸುತ್ತಿದ್ದು, ರಾಯಪುರಂ ಪ್ರದೇಶದಿಂದ 25 ನಾಯಿಗಳನ್ನು ಹಿಡಿದಿದ್ದಾರೆ. ಡಿಸೆಂಬರ್ನಲ್ಲಿ ನಗರ ಮತ್ತು ಸುತ್ತಮುತ್ತಲಿನ ಸುಮಾರು 1 ಲಕ್ಷ ಬೀದಿ ನಾಯಿಗಳಿಗೆ ಸಾಮೂಹಿಕ ರೋಗನಿರೋಧಕ ಅಭಿಯಾನವನ್ನು ಪ್ರಾರಂಭಿಸುವ ಸಾಧ್ಯತೆಯಿದೆ. 2019 ರಲ್ಲಿ ನಗರದ 15 ವಲಯಗಳಲ್ಲಿ ಕೊನೆಯ ಬಾರಿಗೆ ಸಾಮೂಹಿಕ ಲಸಿಕೆ ಅಭಿಯಾನವನ್ನು ನಡೆಸಲಾಗಿತ್ತು.