ಅನೆಗಳ ಅಕ್ರಮ ಸಾಗಾಟಕ್ಕೆ ತಡೆಗಟ್ಟಲು ನಿಯಮಗಳ ಕಟ್ಟುನಿಟ್ಟಿನ ಪಾಲನೆ: ರಾಜ್ಯಗಳಿಗೆ ಕೇಂದ್ರದ ಅಧಿಸೂಚನೆ
ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: ಬಂಧನದಲ್ಲಿರುವ ಆನೆಗಳ ಮಾಲಕತ್ವ ವರ್ಗಾವಣೆ ಹಾಗೂ ಸಾಗಾಟಕ್ಕೆ ಸಂಬಂಧಿಸಿದ ನಿಯಮಾವಳಿಗಳ ಬಗ್ಗೆ ಕೇಂದ್ರ ಸರಕಾರವು ಅಧಿಸೂಚನೆಯನ್ನು ಹೊರಡಿಸಿದೆ.
ಆನೆಗಳ ಅಕ್ರಮ ವರ್ಗಾವಣೆ, ಮಾರಾಟ ಹಾಗೂ ಆನೆಗಳ ಖರೀದಿಗೆ ಸಂಬಂಧಿಸಿ ಬಂದಿರುವ ದೂರುಗಳನ್ನು ಹಾಗೂ ಅಹವಾಲುಗಳನ್ನು ಕೇಂದ್ರ ಪರಿಸರ ಸಚಿವಾಲಯ ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ. ಆನೆಗಳ ವಂಶವಾಹಿ ವಿವರಗಳ ದಾಖಲಾತಿ ಸೇರಿದಂತೆ ಆನೆಗಳ ಸಾಗಾಟ ಹಾಗೂ ಮಾಲಕತ್ವ ವರ್ಗಾವಣೆಗೆ ಸಂಬಂಧಿಸಿದ ಎಲ್ಲಾ ನಿಯಮಗಳ ಅನುಸರಣೆಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ರಾಜ್ಯಗಳಿಗೆ ಶಿಫಾರಸು ಮಾಡಿದೆ.
ರಾಜ್ಯಗಳ ನಡುವೆ ಆನೆಗಳ ಚಲನವಲನವನ್ನು ನಿಯಂತ್ರಿಸುವ ಕುಲಿತಾದ ಬಂಧಿತ ಆನೆ (ಮಾಲಕತ್ವ ವರ್ಗಾವಣೆ ಹಾಗೂ ಸಾಗಣೆ) ನಿಯಾಮವಳಿಗಳ ಅಧಿಸೂಚನೆಯನ್ನು ಕೇಂದ್ರ ಸರಕಾರವು ಹೊರಡಿಸಿದೆಯೆಂದು ಮುಖ್ಯ ವನ್ಯಜೀವಿ ವಾರ್ಡನ್ಗಳು ಹಾಗೂ ಪ್ರಧಾನ ಅರಣ್ಯ ಸಂರಕ್ಷಕರಿಗೆ ಆಗಸ್ಟ್ 20ರಂದು ವಿಜ್ಞಾಪನಾಪತ್ರದಲ್ಲಿ ಕೇಂದ್ರ ಪರಿಸರ ಸಚಿವಾಲಯ ತಿಳಿಸಿದೆ.
ಪರಿಸರ ಸಚಿವಾಲಯದ ಇಲೆಕ್ಟ್ರಾನಿಕ್ ಕಣ್ಗಾವಲು ಆ್ಯಪ್ನಲ್ಲಿ ಅದರ ವಂಶವಾಹಿ ವಿವರಗಳನ್ನು ದಾಖಲಿಸದೆ ಇದ್ದಲ್ಲಿ ಯಾವುದೇ ಆನೆಯ ಸಾಗಣೆಗೆ ಅನುಮತಿ ನೀಡುವಂತಿಲ್ಲವೆಂಬ ಅಧಿಸೂಚನೆಯ ಉಪವಾಕ್ಯ 3ರಲ್ಲಿ ವಿವರಿಸಲಾಗಿದೆ.
ಆನೆಯ ಮಾಲಕನಿಗೆ ಅದನ್ನು ಪೋಷಿಸಲು ಸಾಧ್ಯವಾಗದೆ ಇದ್ದಲ್ಲಿ ಆ ಸಂದರ್ಭದಲ್ಲಿ ಆನೆಯನ್ನು ವರ್ಗಾಯಿಸಲು ಅನುಮತಿಯಿದೆಯೆಂದು ಅಧಿಸೂಚನೆ ತಿಳಿಸಿದೆ. ಆದರೆ ಆನೆಯ ವಂಶವಾಹಿ ವಿವರವನ್ನು ಇಲೆಕ್ಟ್ರಾನಿಕ್ ಕಣ್ಗಾವಲು ಆ್ಯಪ್ನಲ್ಲಿ ದಾಖಲಿಸುವುದು ಕಡ್ಡಾಯವಾಗಿರುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆನೆಗಳ ಮಾಲಕತ್ವ ವರ್ಗಾವಣೆ, ಸಾಗಣೆಗೆ ಸಂಬಂಧಿಸಿ ಮಾರ್ಚ್ 14ರಂದು ಹೊರಡಿಸಲಾಗಿದ್ದ ಅಧಿಸೂಚನೆಯನ್ನು ಟೀಕಿಸಿ ವಿವಿಧ ಪ್ರಾಣಿ ಕಲ್ಯಾಣ ಸಂಘಟನೆಗಳು ಎಪ್ರಿಲ್ 1ರಂದು ಪರಿಸರ ಸಚಿವಾಲಯಕ್ಕೆ ಪತ್ರ ಬರೆದಿದ್ದವು. ಮಾನ್ಯತೆಯಿರುವ ಪರ್ಮಿಟ್ಗಳೊಂದಿಗೆ ಮಾಲಕತ್ವ ವರ್ಗಾವಣೆಗೆ ಅರ್ಹವಾದ ಆನೆಗಳ ಪಟ್ಟಿಯನ್ನು ಪ್ರಕಟಿಸುವಂತೆ ಅವು ಆಗ್ರಹಿಸಿದ್ದವು.