ಹೋಮ್ ವರ್ಕ್ ಮಾಡದ ಕಾರಣಕ್ಕೆ ಶಿಕ್ಷಕ ಹೊಡೆದು ವಿದ್ಯಾರ್ಥಿ ಸಾವು
ಭೋಪಾಲ್: ಹೋಮ್ ವರ್ಕ್ ಪೂರ್ಣಗೊಳಿಸಿಲ್ಲ ಎಂಬ ಕಾರಣಕ್ಕೆ ಖಾಸಗಿ ಶಾಲೆಯ ಶಿಕ್ಷಕನೊಬ್ಬ ಎಂಟನೇ ತರಗತಿಯ ವಿದ್ಯಾರ್ಥಿಯನ್ನು ಹೊಡೆದಿದ್ದು, ತೀವ್ರ ಅಸ್ವಸ್ಥಗೊಂಡ ವಿದ್ಯಾರ್ಥಿ ನಾಲ್ಕು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಜುಲೈ 12ರಂದು ಶಾಲೆಯಿಂದ ಮನೆಗೆ ಬಂದ ಬಾಲಕ ತೀವ್ರ ತಲೆನೋವು ಆಗುತ್ತಿದೆ ಎಂದು ಹೇಳಿದ್ದ. ಆತನ ಕೈ- ಕಾಲುಗಳಲ್ಲಿ ಬಾಸುಂಡೆ ಗುರುತುಗಳು ಕಂಡುಬಂದಿದ್ದವು. ಆಗಾಗ್ಗೆ ವಾಂತಿ ಹಾಗೂ ತೀವ್ರ ಜ್ವರ ಕೂಡಾ ಕಂಡುಬಂದಿತ್ತು ಎನ್ನಲಾಗಿದೆ.
ಬಾಲಕನ ಕುಟುಂಬದವರು ತಕ್ಷಣ ಎರಡು ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಅಂತಿಮವಾಗಿ ಸರ್ಕಾರಿ ಆಸ್ಪತ್ರೆಗೆ ಆತನನ್ನು ಕರೆದೊಯ್ಯಲಾಗಿದ್ದು, ಭಾನುವಾರ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
"ಶಿಕ್ಷಕ ನನ್ನ ಮಗನನ್ನು ಕೋಲಿನಿಂದ ಹೊಡೆದಿರುವುದು ಮಾತ್ರವಲ್ಲದೇ ಇತರ ಹಲವು ವಿಧದಲ್ಲಿ ಶಿಕ್ಷೆ ನೀಡಿದ್ದಾರೆ. ಇದರಿಂದ ಮಗ ಅಸ್ವಸ್ಥಗೊಂಡಿದ್ದ. ಸರ್ಕಾರಿ ಆಸ್ಪತ್ರೆಯ ಬದಲು ಖಾಸಗಿ ಆಸ್ಪತ್ರೆಯಲ್ಲೇ ಮಗುವಿಗೆ ಚಿಕಿತ್ಸೆ ಕೊಡಿಸುವಂತೆ ಶಿಕ್ಷಕ ಒತ್ತಡ ತಂದಿದ್ದ " ಎಂದು ಮೃತ ಬಾಲಕನ ತಂದೆ ಕೊಕ್ ಸಿಂಗ್ ಚೌಹಾಣ್ ದೂರಿದ್ದಾರೆ.
ಹಿಂದೊಮ್ಮೆ ಇದೇ ಶಿಕ್ಷಕ ನನ್ನ ಮಗಗನಿಗೆ ಹೊಡೆದಿದ್ದ. ಈ ಬಗ್ಗೆ ಆಡಳಿತ ಮಂಡಳಿಗೆ ದೂರು ನೀಡಿದಾಗ, ಮುಂದೆ ಇಂಥ ಘಟನೆಗಳು ನಡೆಯುವುದಿಲ್ಲ ಎಂದು ಮಂಡಳಿ ಹೇಳಿದ್ದಾಗಿ ಚೌಹಾಣ್ ವಿವರಿಸಿದ್ದಾರೆ.
ಘಟನೆಯನ್ನು ಖಂಡಿಸಿ ಸಂತ್ರಸ್ತ ಬಾಲಕನ ಶವದೊಂದಿಗೆ ಶಾಲೆಯ ಹೊರಗೆ ರಸ್ತೆ ತಡೆ ನಡೆಸಿದ ಕುಟುಂಬದವರು ಹಾಗೂ ನೆರೆಯವರು, ಶಾಲೆಯ ಪ್ರಾಚಾರ್ಯ ಆಕಾಶ್ ಶ್ರೀವಾಸ್ತವ ಮತ್ತು ಶಿಕ್ಷಕರಾದ ಸೋನು ಶ್ರೀವಾಸ್ತವ ಹಾಗೂ ಅಕ್ಬರ್ ಖಾನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು ಎಂದು ತಿಳಿದು ಬಂದಿದೆ.