ಗೋಕಳ್ಳರೆಂದು ಭಾವಿಸಿ ಫರೀದಾಬಾದ್ ನಲ್ಲಿ ವಿದ್ಯಾರ್ಥಿಯ ಹತ್ಯೆ ಪ್ರಕರಣ | ನಕಲಿ ಗೋರಕ್ಷಕರ ವಿರುದ್ಧ ನೂತನ ಕಾನೂನಿನಡಿ ಪ್ರಕರಣ ದಾಖಲು
ಆರ್ಯನ್ ಮಿಶ್ರ | PC : PTI
ಫರೀದಾಬಾದ್: ಗೋ ಕಳ್ಳಸಾಗಣೆದಾರ ಎಂದು ತಪ್ಪಾಗಿ ಭಾವಿಸಿ, ವಿದ್ಯಾರ್ಥಿಯೊಬ್ಬನಿಗೆ ಗುಂಡಿಟ್ಟು ಹತ್ಯೆಗೈದ ಆರೋಪ ಎದುರಿಸುತ್ತಿರುವ ಐವರು ನಕಲಿ ಗೋ ರಕ್ಷಕರ ವಿರುದ್ಧ ಫರೀದಾಬಾದ್ ಪೊಲೀಸರು ಭಾರತೀಯ ದಂಡ ಸಂಹಿತೆಯ ಗುಂಪು ಹತ್ಯೆ ಸೇರಿದಂತೆ ಮೂರು ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
ಶಂಕಿತ ಗೋ ಕಳ್ಳಸಾಗಣೆದಾರರು ನಗರದಲ್ಲಿ ಸುತ್ತಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಆಧರಿಸಿ, ಆಗಸ್ಟ್ 23ರಂದು ಆರೋಪಿಗಳಾದ ಸೌರಭ್, ಅನಿಲ್ ಕೌಶಿಕ್, ವರುಣ್, ಕೃಷ್ಣ ಹಾಗೂ ಅದೇಶ ಎಂಬುವವರು ದಿಲ್ಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ತನ್ನ ಸ್ನೇಹಿತರಾದ ಶಾಂಕಿ ಮತ್ತು ಹರ್ಷಿತ್ ರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 20 ವರ್ಷ ವಯಸ್ಸಿನ ಆರ್ಯನ್ ಮಿಶ್ರರನ್ನು ಹಿಂಬಾಲಿಸಿದ್ದರು.
ಆರೋಪಿಗಳು ಕಾರನ್ನು ನಿಲ್ಲಿಸುವಂತೆ ಸಂತ್ರಸ್ತ ವಿದ್ಯಾರ್ಥಿಗೆ ಸೂಚಿಸಿದಾಗ, ಕಾರಿನ ಚಾಲಕ ವಾಹನದ ವೇಗವನ್ನು ಮತ್ತಷ್ಟು ಹೆಚ್ಚಿಸಿದ್ದಾನೆ. ಹೀಗಾಗಿ, ಆರೋಪಿಗಳು ಪಲ್ವಾಲ್ ನ ಗಢ್ ಪುರಿ ಟೋಲ್ ಬಳಿ ಕಾರಿನ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಆರ್ಯನ್ ಮಿಶ್ರ ಮೃತಪಟ್ಟಿದ್ದರು ಎನ್ನಲಾಗಿದೆ. ನಂತರ, ಆಗಸ್ಟ್ 28ರಂದು ಎಲ್ಲ ಆರೋಪಿಗಳನ್ನೂ ಬಂಧಿಸಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಸಹಾಯಕ ಪೊಲೀಸ್ ಆಯುಕ್ತ (ಅಪರಾಧ) ಅಮನ್ ಯಾದವ್, ಎರಡು ದಿನಗಳ ಹಿಂದೆ ಫರೀದಾಬಾದ್ ನ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದೆದುರು ಆರೋಪಿಗಳ ವಿರುದ್ಧ ಮಿಶ್ರರ ಸಹ ಪ್ರಯಾಣಿಕರು ಸೇರಿದಂತೆ 30 ಸಾಕ್ಷಿಗಳ ಹೇಳಿಕೆಗಳನ್ನು ಆಧರಿಸಿದ 600 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.