ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ರದ್ದುಗೊಳಿಸಿರುವ ವಿದ್ಯಾರ್ಥಿ ವೀಸಾಗಳಲ್ಲಿ ಅರ್ಧದಷ್ಟು ಭಾರತೀಯರು: ವರದಿ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಅಮೆರಿಕನ್ ವಲಸೆ ವಕೀಲರ ಸಂಘ (ಎಐಎಲ್ಎ)ದ ಪ್ರಕಾರ ಡೊನಾಲ್ಡ್ ಟ್ರಂಪ್ ಸರಕಾರವು ಅಧಿಕಾರ ವಹಿಸಿಕೊಂಡ ಬಳಿಕ ಅಮೆರಿಕವು ವಿದ್ಯಾರ್ಥಿ ವೀಸಾಗಳನ್ನು ರದ್ದುಗೊಳಿಸಿರುವ 327 ಪ್ರಕರಣಗಳಲ್ಲಿ ಶೇ.50ರಷ್ಟು ಭಾರತೀಯರನ್ನು ಒಳಗೊಂಡಿವೆ.
ಸಂಘವು ಗುರುವಾರ ಬಿಡುಗಡೆಗೊಳಿಸಿದ ಮಾಹಿತಿಯು ವಕೀಲರು, ವಿದ್ಯಾರ್ಥಿಗಳು ಮತ್ತು ವಿವಿ ಉದ್ಯೋಗಿಗಳು ಈ ಡೇಟಾವನ್ನು ಸಂಗ್ರಹಿಸಿದ್ದಾರೆ ಎಂದು ತಿಳಿಸಿದೆ.
ಈ ಪ್ರವೃತ್ತಿಯು ಕಳವಳಕಾರಿ ಎಂದು ಹೇಳಿರುವ ಕಾಂಗ್ರೆಸ್ ಪಕ್ಷವು, ಭಾರತ ಸರಕಾರವು ಈ ವಿಷಯವನ್ನು ಅಮೆರಿಕದೊಂದಿಗೆ ಕೈಗೆತ್ತಿಕೊಳ್ಳುತ್ತದೆಯೇ ಎಂದು ಪ್ರಶ್ನಿಸಿದೆ.
ವೀಸಾ ರದ್ದತಿಗೆ ಕಾರಣಗಳು ಯಾದ್ರಚ್ಛಿಕ ಮತ್ತು ಅಸ್ಪಷ್ಟವಾಗಿವೆ ಎಂದು ಗುರುವಾರ ಹೇಳಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು, ವಿದ್ಯಾರ್ಥಿಗಳಲ್ಲಿ ಭೀತಿ ಮತ್ತು ಆತಂಕ ಹೆಚ್ಚುತ್ತಿದೆ ಎಂದರು.
ಭಾರತೀಯ ರಾಯಭಾರ ಕಚೇರಿ ಮತ್ತು ದೂತಾವಾಸ ವಿದ್ಯಾರ್ಥಿಗಳಿಗೆ ಬೆಂಬಲವನ್ನು ಒದಗಿಸಲು ಅವರೊಂದಿಗೆ ಸಂಪರ್ಕದಲ್ಲಿವೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗುರುವಾರ ತಿಳಿಸಿದೆ.
‘ಹಲವಾರು ಭಾರತೀಯ ವಿದ್ಯಾರ್ಥಿಗಳು ತಮ್ಮ ಎಫ್-1 ವೀಸಾ ಸ್ಥಿತಿಯ ಬಗ್ಗೆ ಅಮೆರಿಕ ಸರಕಾರದಿಂದ ಸಂದೇಶಗಳನ್ನು ಸ್ವೀಕರಿಸಿರುವುದು ನಮಗೆ ತಿಳಿದಿದೆ ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ‘ನಾವು ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಹೇಳಿದರು.
ವಿದೇಶಾಂಗ ಮತ್ತು ವಲಸೆ ಮತ್ತು ಕಸ್ಟಮ್ಸ್ ಜಾರಿ ಇಲಾಖೆಯು ವೀಸಾ ರದ್ದತಿಗಾಗಿ ಯಾವುದೇ ಪ್ರತಿಭಟನೆಯಲ್ಲಿ ಭಾಗಿಯಾಗಿರದವರೂ ಸೇರಿದಂತೆ ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಕ್ರಮಣಕಾರಿಯಾಗಿ ಗುರಿಯಾಗಿಸಿಕೊಂಡಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿರುವ ಎಐಎಲ್ಎ, ಅಮೆರಿಕವು ‘ಕ್ಯಾಚ್ ಆ್ಯಂಡ್ ರಿವೋಕ್’ಕಾರ್ಯಕ್ರಮದಡಿ ಕೃತಕ ಬುದ್ಧಿಮತ್ತೆಯನ್ನು ಬಳಸಿ ವಿದ್ಯಾರ್ಥಿ ವೀಸಾಗಳನ್ನು ಹೊಂದಿರುವವರ ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ಪರಿಶೀಲಿಸುತ್ತಿದೆ ಎಂದು ಬೆಟ್ಟು ಮಾಡಿದೆ.
ವೀಸಾ ರದ್ದುಗೊಂಡವರ ಪೈಕಿ ಚೀನಿ ವಿದ್ಯಾರ್ಥಿಗಳು ಶೇ.14ರಷ್ಟಿದ್ದು ಭಾರತೀಯರ ನಂತರದ ಸ್ಥಾನದಲ್ಲಿದ್ದಾರೆ. ಇತರ ಪ್ರಮುಖ ದೇಶಗಳಲ್ಲಿ ದಕ್ಷಿಣ ಕೊರಿಯಾ, ನೇಪಾಳ ಮತ್ತು ಬಾಂಗ್ಲಾದೇಶ ಸೇರಿವೆ ಎಂದು ಅದು ತಿಳಿಸಿದೆ.
ಒಟ್ಟು ಶೇ.50ರಷ್ಟು ವೀಸಾ ರದ್ದತಿಯು ಐಚ್ಛಿಕ ಪ್ರಾಯೋಗಿಕ ತರಬೇತಿಯಲ್ಲಿದ್ದವರ ಮೇಲೆ ಪರಿಣಾಮ ಬೀರಿದ್ದು,ಅವರು ಪದವಿ ಪಡೆದ ಬಳಿಕ ಅಮೆರಿಕದಲ್ಲಿ ಉದ್ಯೋಗದಲ್ಲಿದ್ದರು.
ಒಟ್ಟು ಪ್ರಕರಣಗಲ್ಲಿ ಕೇವಲ ಇಬ್ಬರು ವಿದ್ಯಾರ್ಥಿಗಳು ರಾಜಕೀಯ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ ಇತಿಹಾಸವನ್ನು ಹೊಂದಿದ್ದಾರೆ. ಶೇ.86ರಷ್ಟು ಪ್ರಕರಣಗಳಲ್ಲಿ ವಿದ್ಯಾರ್ಥಿಗಳು ಪೋಲಿಸರೊಂದಿಗೆ ಕೊಂಚ ವಾಗ್ವಾದವನ್ನು ನಡೆಸಿದ್ದರು. ಶೇ.33ರಷ್ಟು ವಿದ್ಯಾರ್ಥಿಗಳ ವಿರುದ್ಧದ ಪ್ರಕರಣಗಳು ವಜಾಗೊಂಡಿದ್ದು, ಅವರ ಮೇಲೆ ಎಂದಿಗೂ ಆರೋಪಗಳನ್ನು ಹೊರಿಸಿರಲಿಲ್ಲ ಅಥವಾ ವಿಚಾರಣೆಗೆ ಒಳಪಟ್ಟಿರಲಿಲ್ಲ. ಇಬ್ಬರು ವಿದ್ಯಾರ್ಥಿಗಳು ಕೌಟುಂಬಿಕ ಹಿಂಸಾಚಾರ ಪ್ರಕರಣಗಳಲ್ಲಿ ದೂರುದಾರರಾಗಿದ್ದರು. ಇತರ ಕೆಲವರು ವೇಗಮಿತಿ ಮತ್ತು ಪಾರ್ಕಿಂಗ್ ನಿಯಮಗಳನ್ನು ಉಲ್ಲಂಘಿಸಿದ್ದರು ಎಂದು ಎಐಎಲ್ಎ ಹೇಳಿಕೆಯಲ್ಲಿ ತಿಳಿಸಿದೆ.
ಈ ವರದಿಗಳ ಆಧಾರದಲ್ಲಿ ಇನ್ನಷ್ಟು ನಿರಂಕುಶ ವೀಸಾ ರದ್ದತಿಗಳನ್ನು ಹಾಗೂ ವಿದ್ಯಾರ್ಥಿ ಮತ್ತು ವಿನಿಮಯ ಸಂದರ್ಶಕರ ಮಾಹಿತಿ ವ್ಯವಸ್ಥೆ(SEVIS)ಯಲ್ಲಿ ‘ಸಾಕಷ್ಟು ಸೂಚನೆ ಮತ್ತು ವಿವರಣೆಯಿಲ್ಲದೆ’ ವಿದ್ಯಾರ್ಥಿಗಳ ವಲಸೆ ಸ್ಥಿತಿಯನ್ನು ಕಾನೂನುಬಾಹಿರವಾಗಿ ಅಂತ್ಯಗೊಳಿಸುವುದನ್ನು ತಡೆಯಲು ಪಾರದರ್ಶಕತೆ,ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ಅಗತ್ಯವಿದೆ ಎನ್ನುವುದು ಸ್ಪಷ್ಟವಾಗಿದೆ ಎಂದು ಅದು ಹೇಳಿದೆ.
SEVIS ಅಮೆರಿಕದಲ್ಲಿ ವಲಸೆರಹಿತ ವಿದ್ಯಾರ್ಥಿಗಳು ಮತ್ತು ವಿನಿಮಯ ಸಂದರ್ಶಕರ ಮಾಹಿತಿಯನ್ನು ಪತ್ತೆ ಹಚ್ಚುವ ಡೇಟಾ ಬೇಸ್ ಆಗಿದೆ.
ವಿದ್ಯಾರ್ಥಿಗಳು SEVIS ನ ತಪ್ಪು ನಿರ್ಧಾರಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿರಬೇಕು ಎಂದು ಎಐಎಲ್ಎ ಒತ್ತಿ ಹೇಳಿದೆ.