ಎಸ್ಸಿ ,ಒಬಿಸಿ ಸಮುದಾಯಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಅನುದಾನ ವಿತರಣೆಯಲ್ಲಿ ವಿಳಂಬ: ವರದಿ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಪರಿಶಿಷ್ಟ ಜಾತಿ(ಎಸ್ಸಿ)ಗಳ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಫೆಲೋಶಿಪ್(ಎನ್ಎಫ್ಎಸ್ಸಿ) ಕಾರ್ಯಕ್ರಮದಡಿ ಅನುದಾನ ಪಡೆಯುವಲ್ಲಿ ನೂರಾರು ಎಸ್ಸಿ ಸಂಶೋಧನಾ ವಿದ್ಯಾರ್ಥಿಗಳು ವಿಳಂಬಗಳನ್ನು ಎದುರಿಸುತ್ತಿದ್ದು,ಎರಡರಿಂದ ಐದು ತಿಂಗಳವರೆಗೆ ಹಣ ಪಾವತಿ ಬಾಕಿಯುಳಿದಿದೆ ಎಂದು ʼThe Wireʼ ಸುದ್ದಿಸಂಸ್ಥೆ ವರದಿ ಮಾಡಿದೆ.
ಇತರ ಹಿಂದುಳಿದ ವರ್ಗ(ಒಬಿಸಿ)ಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಕಳೆದ ವರ್ಷದ ಜೂನ್ನಿಂದ ಅನುದಾನ ವಿತರಿಸಲಾಗಿಲ್ಲ ಎಂದು ಕೇಂದ್ರ ಸರಕಾರವು ಕೆಲವು ದಿನಗಳ ಹಿಂದಷ್ಟೇ ಸಂಸತ್ತಿನಲ್ಲಿ ತಿಳಿಸಿತ್ತು.
ಹಾಲಿ ವಿತ್ತ ವರ್ಷಕ್ಕಾಗಿ ಬಾಕಿಯಿರುವ ಎನ್ಎಫ್-ಒಬಿಸಿ ಅನುದಾನ ಸಮಸ್ಯೆಯನ್ನು ಬಗೆಹರಿಸಲು ಸಾಮಾಜಿಕ ನ್ಯಾಯ ಸಚಿವಾಲಯವು ವೆಚ್ಚ ಇಲಾಖೆಯೊಂದಿಗೆ ಚರ್ಚಿಸುತ್ತಿದೆ ಎಂದು ಸರಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ಹೇಳಿದೆ.
ಕೇಂದ್ರ ಸರಕಾರದ ಪ್ರಕಾರ ನಿಗದಿತ 55 ಕೋಟಿ ರೂ.ಗಳ ಪೈಕಿ 54.5 ಕೋಟಿ ರೂ.ಗಳನ್ನು ಈಗಾಗಲೇ ವೆಚ್ಚ ಮಾಡಲಾಗಿದೆ.
ಪ್ರವೇಶ ಪಡೆದಿರುವ ಫೆಲೋಗಳ ಸಂಖ್ಯೆಗೆ ಸಂಬಂಧಿಸಿದಂತೆ ವೆಚ್ಚ ಇಲಾಖೆಯು ಕೆಲವು ಪ್ರಶ್ನೆಗಳನ್ನೆತ್ತಿದೆ. ಪ್ರಸಕ್ತ ಹಣಕಾಸು ವರ್ಷಕ್ಕಾಗಿ ಬಾಕಿ ಮೊತ್ತಗಳನ್ನು ಪಾವತಿಸುವ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯ ಸಚಿವಾಲಯವು ಈ ಪ್ರಶ್ನೆಗಳನ್ನು ಬಗೆಹರಿಸುತ್ತಿದೆ. ಇದಲ್ಲದೆ,ಮುಂದಿನ ವರ್ಷದ ಹಂಚಿಕೆಯನ್ನು ಈಗಾಗಲೇ ಗಮನಾರ್ಹವಾಗಿ ಹೆಚ್ಚಿಸಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದನ್ನು ವರದಿಯು ಉಲ್ಲೇಖಿಸಿದೆ.
ಗುರುವಾರ,ಫೆ.6ರಂದು ಅಖಿಲ ಭಾರತ ಸಂಶೋಧನಾ ವಿದ್ಯಾರ್ಥಿಗಳ ಸಂಘ(ಎಐಆರ್ಎಸ್ಎ)ವು ವಿಳಂಬಗಳ ಕುರಿತು ಸಾಮಾಜಿಕ ನ್ಯಾಯ ಕಾರ್ಯದರ್ಶಿ ಅಮಿತ್ ಯಾದವ್ ಅವರಿಗೆ ಪತ್ರವೊಂದನ್ನು ಬರೆದಿದೆ.
‘ಒಂದು ದಶಕ ಅಥವಾ ಅದಕ್ಕೂ ಹೆಚ್ಚು ಸಮಯದಿಂದ ನಾವು ಈ ಸಮಸ್ಯೆಯನ್ನು ಎತ್ತುತ್ತಲೇ ಇದ್ದೇವೆ. ಸಂಶೋಧಕರು ತಮ್ಮ ಸಂಶೋಧನಾ ಕ್ಷೇತ್ರದ ಮೇಲೆ ಗಮನವನ್ನು ಕೇಂದ್ರೀಕರಿಸಲು ಪ್ರತಿ ತಿಂಗಳ ಅಂತ್ಯದಲ್ಲಿ ಅವರು ಫೆಲೋಶಿಪ್ ಹಣವನ್ನು ಪಡೆಯುವುದು ಪ್ರಾಥಮಿಕ ಅಗತ್ಯವಾಗಿದೆ ’ ಎಂದು ಎಐಆರ್ಎಸ್ಎ ಅಧ್ಯಕ್ಷ ಲಾಲಚಂದ್ರ ವಿಶ್ವಕರ್ಮ ಹೇಳಿದರು.
ಡಿಸೆಂಬರ್ ಮತ್ತು ಜನವರಿ ತಿಂಗಳ ತನ್ನ ಫೆಲೋಶಿಪ್ ಹಣ ಇನ್ನೂ ಬಾಕಿಯಿದೆ. 130 ಸಂಶೋಧನಾ ವಿದ್ಯಾರ್ಥಿಗಳ ಗುಂಪು ಇಂತಹುದೇ ವಿಳಂಬಗಳನ್ನು ಎದುರಿಸುತ್ತಿದ್ದು,ಒಂದರಿಂದ ಮೂರು ತಿಂಗಳ ಹಣಪಾವತಿ ಬಾಕಿಯಿದೆ ಎಂದು ಪಂಜಾಬ್ ವಿವಿಯ ಎನ್ಎಫ್ಎಸ್ಸಿ ಸಂಶೋಧನಾ ವಿದ್ಯಾರ್ಥಿನಿಯೋರ್ವರು ತಿಳಿಸಿದರು.
ಸಕಾಲದಲ್ಲಿ ಫೆಲೋಶಿಪ್ ಹಣವನ್ನು ವಿತರಿಸುವಂತೆ,ಬಜೆಟ್ ಹಂಚಿಕೆಯಲ್ಲಿ ಮೊತ್ತವನ್ನು ಹೆಚ್ಚಿಸುವಂತೆ ಮತ್ತು ಪೀಡಿತ ಸಂಶೋಧನಾ ವಿದ್ಯಾರ್ಥಿಗಳ ಕುಂದುಕೊರತೆಗಳ ಪರಿಹಾರಕ್ಕಾಗಿ ಕಾರ್ಯವಿಧಾನವನ್ನು ರೂಪಿಸುವಂತೆ ಎಐಆರ್ಎಸ್ಎ ತನ್ನ ಪತ್ರದಲ್ಲಿ ಸರಕಾರವನ್ನು ಆಗ್ರಹಿಸಿದೆ.