ಕೋಲ್ಕತಾ ವೈದ್ಯೆಯ ಕೊಲೆ, ಅತ್ಯಾಚಾರ ಖಂಡಿಸಿ ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
PC : ANI
ಢಾಕಾ : ಪಶ್ಚಿಮಬಂಗಾಳದ ಆರ್.ಜಿ.ಕರ್ ವೈದ್ಯಕೀಯ ಕಾಲೇಜ್ನಲ್ಲಿ ಕಿರಿಯ ವೈದ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಬಾಂಗ್ಲಾದೇಶದ ಪ್ರತಿಷ್ಠಿತ ಢಾಕಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಶುಕ್ರವಾರ ಧರಣಿ ನಡೆಸಿದರು.
‘ಅವಾಝ್ ತೊಲೊ ನಾರಿ’ (ಸ್ತ್ರೀಯರೇ ನಿಮ್ಮ ಧ್ವನಿಯೆತ್ತಿ) ಬ್ಯಾನರ್ನಡಿ ಆಯೋಜಿಸಲಾದ ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು ಎಂದು ‘ಢಾಕಾ ಟ್ರಿಬ್ಯೂನ್’ ದಿನಪತ್ರಿಕೆ ವರದಿ ಮಾಡಿದೆ.
ಪಶ್ಚಿಮಬಂಗಾಳದಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಪ್ರಕರಣದ ತನಿಖೆಗೆ ಸಂಬಂಧಿಸಿ ವೈದ್ಯಕೀಯ ಕಾಲೇಜ್ನ ಆಡಳಿತವು ಅಸಹಕಾರ ಪ್ರದರ್ಶಿಸುತ್ತಿರುವುದು ನಮಗೆ ತಿಳಿದಿದೆ. ಕಾಲೇಜು ಆಡಳಿತವು ತನಿಖೆಗೆ ಗರಿಷ್ಠ ನೆರವನ್ನು ಒದಗಿಸಬೇಕು, ಕಟ್ಟುನಿಟ್ಟಾಗಿ ಕಾನೂನನ್ನು ಜಾರಿಗೊಳಿಸಬೇಕು ಹಾಗೂ ತೀರ್ಪನ್ನು ಸಮರ್ಪಕವಾಗಿ ಪ್ರಕಟಿಸಬೇಕು ಎಂದು ಢಾಕಾ ವಿವಿಯ ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ರಹನುಮಾ ಅಹ್ಮದ್ ನಿರೆತ್ ತಿಳಿಸಿದ್ದಾರೆ.
‘‘ಜಗತ್ತಿನಾದ್ಯಂತ ಮಹಿಳೆಯರು ಅತ್ಯಾಚಾರಗೊಳಗಾಗುತ್ತಿದ್ದಾರೆ. ಕಿರಿ ವೈದ್ಯೆಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಕೋಲ್ಕತಾದ ಆರ್.ಜಿ.ಕರ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಚಳವಳಿಗೆ ನಾವು ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದೇನೆ. ಇದರ ಜೊತೆಗೆ ಬಾಂಗ್ಲಾದ ಕೊಮಿಲಾದಲ್ಲಿ ನಡೆದ ಮಹಿಳೆಯ ಅತ್ಯಾಚಾರ , ಕೊಲೆ ಪ್ರಕರಣದ ಬಹಿರಂಗ ತನಿಖೆಗೂ ತಾವು ಆಗ್ರಹಿಸುವುದಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಢಾಕಾ ವಿವಿಯ ಮಾನವಕುಲಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಅನ್ಯಾ ಫಾಹಿಮ್ ತಿಳಿಸಿದ್ದಾರೆ.