ಮುಸ್ಲಿಮರ ಸೇರ್ಪಡೆಗಾಗಿ ಒಬಿಸಿ ಮೀಸಲಾತಿಯ ಉಪವರ್ಗೀಕರಣ ಅಗತ್ಯ:ಅಧ್ಯಯನ ವರದಿ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಮುಸ್ಲಿಮರನ್ನು ಸೇರ್ಪಡೆಗೊಳಿಸಲು ಒಬಿಸಿ ಮೀಸಲಾತಿ ವರ್ಗದ ಉಪವರ್ಗೀಕರಣ ಅಗತ್ಯ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಫೆ.5ರಂದು ಸೆಂಟರ್ ಫಾರ್ ಡೆವಲಪ್ಮೆಂಟ್ ಪಾಲಿಸಿ ಆ್ಯಂಡ್ ಪ್ರ್ಯಾಕ್ಟೀಸ್(ಸಿಡಿಪಿಪಿ) ಮತ್ತು ಯುಎಸ್-ಇಂಡಿಯಾ ಪಾಲಿಸಿ ಇನ್ಸ್ಟಿಟ್ಯೂಟ್ ಇವುಗಳ ಸಹಭಾಗಿತ್ವದಲ್ಲಿ ಬಿಡುಗಡೆಗೊಳಿಸಲಾದ ‘ಸಮಕಾಲೀನ ಭಾರತದಲ್ಲಿ ಮುಸ್ಲಿಮರಿಗಾಗಿ ಸಕಾರಾತ್ಮಕ ಕ್ರಮದ ಮರುಚಿಂತನೆ’ ಶೀರ್ಷಿಕೆಯ ವರದಿಯಲ್ಲಿ ಈ ಅಂಶಗಳನ್ನು ಒತ್ತಿ ಹೇಳಲಾಗಿದೆ.
ಪರಿಶಿಷ್ಟ ಜಾತಿ ಕೋಟಾದಡಿ ದಲಿತ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಅವಕಾಶ ಹಾಗೂ ತರ್ಕಬದ್ಧ ಆಧಾರದಲ್ಲಿ ಮೀಸಲಾತಿಯ ಮೇಲಿನ ಹಾಲಿ ಶೇ.50 ಮಿತಿಯ ಪುನರ್ಮೌಲ್ಯಮಾಪನ ಮಾಡಬೇಕು ಎಂಬ ಸಲಹೆಯನ್ನು ವರದಿಯು ನೀಡಿದೆ.
ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್(ಸಿಎಸ್ಡಿಎಸ್)ನ ಅಸೋಸಿಯೇಟ್ ಪ್ರೊಫೆಸರ್ಗಳಾದ ಹಿಲಾಲ್ ಅಹ್ಮದ್ ಮತ್ತು ಮುಹಮ್ಮದ್ ಸಂಜೀರ್ ಆಲಂ ಹಾಗೂ ಪಾಲಿಸಿ ಪರ್ಸ್ಪೆಕ್ಟಿವ್ ಫೌಂಡೇಷನ್ನ ಅಸೋಸಿಯೇಟ್ ರೀಸರ್ಚ್ ಫೆಲೊ ನಝೀಮಾ ಪರ್ವೀನ್ ಅವರು ಬರೆದಿರುವ ವರದಿಯು ಮುಸ್ಲಿಮ್ ಸಮುದಾಯಕ್ಕಾಗಿ ಸಕಾರಾತ್ಮಕ ಕ್ರಮಗಳನ್ನು ಪರಿಶೀಲಿಸಿದೆ ಮತ್ತು ಮುಂದಿನ ಮಾರ್ಗಸೂಚಿಯನ್ನು ಒದಗಿಸಿದೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಹ್ಮದ್, ‘ವರದಿಯು ಸರಕಾರದ ಅಸ್ತಿತ್ವದಲ್ಲಿರುವ ನೀತಿಗಳು ಮತ್ತು ಕಾಯಕ್ರಮಗಳ ಕುರಿತು ಅವಲೋಕನವಾಗಿದೆ. ಸಮಕಾಲೀನ ಸಮಯದಲ್ಲಿ ಮುಸ್ಲಿಮರಿಗಾಗಿ ಸಕಾರಾತ್ಮಕ ಕ್ರಮದ ಬಗ್ಗೆ ಮಾತನಾಡುವಂತೆ ನೀತಿ ನಿರೂಪಕರು ಮತ್ತು ರಾಜಕೀಯ ವರ್ಗವನ್ನು ಪ್ರೇರೇಪಿಸಲು ನಾವು ಬಯಸಿದ್ದೇವೆ. ಇತ್ತೀಚಿನ ದಿನಗಳಲ್ಲಿ ಈ ವಿಷಯವು ನೀತಿ ಮತ್ತು ರಾಜಕೀಯ ಪ್ರಸ್ತುತತೆಯನ್ನು ಕಳೆದುಕೊಂಡಿದೆ’ ಎಂದು ಹೇಳಿದರು.
ಕೆಲವು ರಾಜ್ಯಗಳಲ್ಲಿರುವಂತೆ ಒಬಿಸಿ ವರ್ಗದಡಿ ಧರ್ಮಾಧಾರಿತ ಕೋಟಾವನ್ನು ಮುಂದುವರಿಸುವುದು ಹಾಗೂ ಒಬಿಸಿಯ ತರ್ಕಬದ್ಧ ಮತ್ತು ಜಾತ್ಯತೀತ ಉಪವರ್ಗೀಕರಣ ವರದಿಯಲ್ಲಿನ ಪ್ರಮುಖ ಶಿಫಾರಸು ಆಗಿದೆ. ಒಬಿಸಿಗಳು ಪ್ರಸ್ತುತ ಶೇ.27ರಷ್ಟು ಮೀಸಲಾತಿಯನ್ನು ಹೊಂದಿದ್ದಾರೆ. ವಿವಿಧ ರಾಜ್ಯಗಳಲ್ಲಿ ವಿವಿಧ ಗುಂಪುಗಳನ್ನು ಒಬಿಸಿಗಳನ್ನಾಗಿ ವರ್ಗೀಕರಿಸಿರುವುದರಿಂದ ಇದು ರಾಜ್ಯಗಳಲ್ಲಿ ವಿಭಿನ್ನವಾಗಿದೆ. ಎಸ್ಸಿ ವರ್ಗದಲ್ಲಿ ದಲಿತ ಮುಸ್ಲಿಮರು ಮತ್ತು ಸಿಕ್ಖರನ್ನು ಸೇರಿಸಲು ಈ ವರ್ಗವನ್ನು ಜಾತ್ಯತೀತಗೊಳಿಸುವುದು ಅಗತ್ಯವಾಗಿದೆ ಎಂದೂ ವರದಿಯು ಹೇಳಿದೆ.
ಎಸ್ಸಿ ಕೋಟಾದಲ್ಲಿ ಅಲ್ಪಸಂಖ್ಯಾತರ ಸೇರ್ಪಡೆಗಾಗಿ ತನ್ನ ವಾದವನ್ನು ಸಮರ್ಥಿಸಿಕೊಳ್ಳಲು ವರದಿಯು,ಇದಕ್ಕಾಗಿ ಪಸ್ಮಾಂಡ ಮುಸ್ಲಿಮ್ ಸಮುದಾಯದ ಬೇಡಿಕೆಯನ್ನು ಎತ್ತಿ ತೋರಿಸಿದೆ. ಜಾತಿ ಆಧಾರಿತ ಶೋಷಣೆಯು ಹಿಂದುಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ ಎಂದು ಅದು ಹೇಳಿದೆ.
‘ಕ್ರಿಯಾ ಯೋಜನೆ’ ಶೀರ್ಷಿಕೆಯ ಅಧ್ಯಾಯದಲ್ಲಿ ವರದಿಯು 1992ರ ಇಂದ್ರ ಸಾಹ್ನಿ ವಿರುದ್ಧ ಭಾರತ ಒಕ್ಕೂಟ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ನಿಗದಿಗೊಳಿಸಿರುವ ಶೇ.50ರ ಮೀಸಲಾತಿ ಮಿತಿಯನ್ನು ಹೊಸ ಹಿಂದುಳಿದ ಸಮುದಾಯಗಳನ್ನು ಸಕಾರಾತ್ಮಕ ಕ್ರಮ ಚೌಕಟ್ಟಿನಲ್ಲಿ ಸೇರಿಸಲು ಮರುಮೌಲ್ಯಮಾಪನ ಮಾಡಬೇಕು ಎಂದು ವರದಿಯು ಹೇಳಿದೆ.
ಮುಸ್ಲಿಮರು ಒಬಿಸಿ ವರ್ಗದಡಿ ಮೀಸಲಾತಿಯನ್ನು ಹೊಂದಿರುವ ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಂತಹ ರಾಜ್ಯಗಳ ನಿದರ್ಶನಗಳನ್ನು ಉಲ್ಲೇಖಿಸಿರುವ ವರದಿಯ,ಇಂತಹ ವರ್ಗೀಕರಣಗಳು ಮತ್ತು ಉಪ-ಕೋಟಾಗಳು ನ್ಯಾಯಾಂಗದ ಒಪ್ಪಿಗೆಯನ್ನು ಪಡೆದಿವೆ ಎಂದು ಹೇಳಿದೆ.
ಮುಸ್ಲಿಮರು ಸಮಾಜದ ಕೆಳಹಂತಗಳಲ್ಲಿಯ ವೃತ್ತಿಗಳಲ್ಲಿ ಕೇಂದ್ರೀಕೃತರಾಗಿದ್ದಾರೆ ಎಂದು ಬೆಟ್ಟು ಮಾಡಿರುವ ವರದಿಯು,ಮುಸ್ಲಿಮರು ಎಸ್ಸಿ/ಎಸ್ಟಿಗಳಿಗಿಂತ ಉತ್ತಮ ಸ್ಥಾನದಲ್ಲಿದ್ದರೂ ಅವರು ಹಿಂದು ಮುಂದುವರಿದ ಜಾತಿ(ಎಚ್ಎಫ್ಸಿ)ಗಳು ಮತ್ತು ಹಿಂದು ಒಬಿಸಿಗಳಿಗಿಂತ ಬಹಳ ಹಿಂದುಳಿದಿದ್ದಾರೆ ಎಂದು ಹೇಳಿದೆ.