ಭಾರತದಿಂದ ಹೈಪರ್ ಸಾನಿಕ್ ಕ್ಷಿಪಣಿಯ ಯಶಸ್ವಿ ಪ್ರಾಯೋಗಿಕ ಉಡಾವಣೆ
ದೇಶದ ಕ್ಷಿಪಣಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು
PC : PTI
ಹೊಸದಿಲ್ಲಿ : ಭಾರತವು ತನ್ನ ಚೊಚ್ಚಲ ದೀರ್ಘ ವ್ಯಾಪ್ತಿಯ ಹೈಪರ್ ಸಾನಿಕ್ ಕ್ಷಿಪಣಿಯ ಹಾರಾಟದ ಪ್ರಯೋಗವನ್ನು ಯಶಸ್ವಿಯಾಗಿ ನಡೆಸುವ ಮೂಲಕ ಕ್ಷಿಪಣಿ ತಂತ್ರಜ್ಞಾನದಲ್ಲಿ ಮಹತ್ವದ ಮೈಲುಗಲ್ಲನ್ನು ಸಾಧಿಸಿದೆ.
ಒಡಿಶಾ ಕರಾವಳಿ ಸಮೀಪದ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿರುವ ಸಮಗ್ರ ಪರೀಕ್ಷಾ ವಲಯ (ಐಟಿಆರ್)ದಲ್ಲಿ ಶನಿವಾರ ತಡರಾತ್ರಿ ಹೈಪರ್ ಸಾನಿಕ್ ಕ್ಷಿಪಣಿಯ ಪ್ರಾಯೋಗಿಕ ಉಡಾವಣೆಯನ್ನು ಭಾರತವು ನಡೆಸಿದೆ. ಹಿರಿಯ ಡಿಆರ್ಡಿಓ ಅಧಿಕಾರಿಗಳು ಹಾಗೂ ರಕ್ಷಣಾ ಪಡೆಗಳ ಅಧಿಕಾರಿಗಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆಯು (ಡಿಆರ್ಡಿಓ) ಸ್ವದೇಶದಲ್ಲಿ ನಿರ್ಮಿಸಿ, ಅಭಿವೃದ್ಧಿಪಡಿಸಿದ ಕ್ಷಿಪಣಿಯ ಪ್ರಾಯೋಗಿಕ ಉಡಾವಣೆಯನ್ನು ರಾತ್ರಿ ಸಮಯದಲ್ಲಿ ನಡೆಸಿರುವುದು ಇದು ಮೊದಲ ಸಲವಾಗಿದೆ. 1500 ಕಿ.ಮೀ.ಗಿಂತಲೂ ಅಧಿಕ ದೊರದವರೆಗೆ ವಿವಿಧ ಪೇಲೋಡ್ಗಳನ್ನು ಕೊಂಡೊಯ್ಯಲು ಸಾಧ್ಯವಾಗುವಂತಹ ರೀತಿಯಲ್ಲಿ ಈ ಹೈಪರ್ ಸಾನಿಕ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ.
ಹೈದರಾಬಾದ್ ನಲ್ಲಿರುವ ಡಾ.ಎಪಿಜೆ ಅಬ್ದುಲ್ ಕಲಾಂ ಕ್ಷಿಪಣಿ ಸಂಕೀರ್ಣದ ಅಧೀನದಲ್ಲಿರುವ ಪ್ರಯೋಗಾಲಯಗಳು ಮತ್ತು ಕೈಗಾರಿಕಾ ಪಾಲುದಾರರ ಸಹಭಾಗಿತ್ವದಲ್ಲಿ ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ.
ಹೈಪರ್ ಸಾನಿಕ್ ಕ್ಷಿಪಣಿಯ ಯಶಸ್ವಿ ಪ್ರಾಯೋಗಿಕ ಉಡಾವಣೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದು, ಇದೊಂದು ಐತಿಹಾಸಿಕ ಸಾಧನೆಯೆಂದು ಬಣ್ಣಿಸಿದ್ದಾರೆ. ಇಂತಹ ನಿರ್ಣಾಯಕ ಹಾಗೂ ಸುಧಾರಿತ ಮಿಲಿಟರಿ ತಂತ್ರಜ್ಞಾನಗಳನ್ನು ಹೊಂದಿದ ಕೆಲವೇ ಕೆಲವು ರಾಷ್ಟ್ರಗಳ ಸಾಲಿಗೆ ಭಾರತವು ಈಗ ಸೇರ್ಪಡೆಗೊಂಡಿದೆ’’ ಎಂದು ಅವರು ‘ಎಕ್ಸ್’ಪೋಸ್ಟ್ನಲ್ಲಿ ಹರ್ಷ ವ್ಯಕ್ತಡಿಸಿದ್ದಾರೆ.
ಈ ಮಹತ್ವದ ಸಾಧನೆಗಾಗಿ ಸಾಮೂಹಿಕವಾಗಿ ಶ್ರಮಿಸಿದ ಅವರು ಡಿಆರ್ಡಿಓ, ಸಶಸ್ತ್ರಪಡೆಗಳು ಹಾಗೂ ಭಾರತದ ರಕ್ಷಣಾ ಕೈಗಾರಿಕಾ ವಲಯವನ್ನು ರಾಜನಾಥ್ ಸಿಂಗ್ ಅವರು ಅಭಿನಂದಿಸಿದ್ದಾರೆ.
ಶಬ್ಧಕ್ಕಿಂತ 5 ಪಟ್ಟುವೇಗ... ಹೈಪರ್ ಸಾನಿಕ್ ಕ್ಷಿಪಣಿಯ ವೈಶಿಷ್ಟ್ಯಗಳು
1. ಹೈಪರ್ಸಾನಿಕ್ ಕ್ಷಿಪಣಿಯು ಶಬ್ಧಕ್ಕಿಂತ 5 ಪಟ್ಟು ವೇಗದಲ್ಲಿ ಚಲಿಸುತ್ತದೆ. ಅದರ ಅತ್ಯಧಿಕ ವೇಗ ಹಾಗೂ ಕಡಿಮೆ ಎತ್ತರದಲ್ಲಿ ಹಾರಬಲ್ಲ ಅದರ ಸಾಮರ್ಥ್ಯದಿಂದಾಗಿ ಸಾಂಪ್ರಾದಾಯಿಕ ಪ್ರಕ್ಷೇಪಕ ಕ್ಷಿಪಣಿಗಳಿಗೆ, ಅದನ್ನು ಪತ್ತೆಹಚ್ಚಲು ಅಥವಾ ತಡೆಯೊಡ್ಡಲು ಕಷ್ಟಕರವಾಗಿದೆ. ಅವು ಗಂಟೆಗೆ ಮ್ಯಾಕ್ (ಶಬ್ದದ ವೇಗವನ್ನು ಳೆಯುವ ಮಾನದಂಡ) 5 ವೇಗದಲ್ಲಿ ಅಂದರೆ ತಾಸಿಗೆ 6125 ಕಿ.ಮೀ. ಚಲಿಸುತ್ತದೆ.
2. ಭಾರತದ ಅಣ್ವಸ್ತ್ರ ಪ್ರತಿರೋಧ ಸಾಮರ್ಥ್ಯವನ್ನು ಈ ಕ್ಷಿಪಣಿಯು ಬಲಪಡಿಸಲಿದೆ.
3. ಭಾರತವು ಈ ಹಿಂದೆ ಸೆಪ್ಟೆಂಬರ್ 2020ರ ಹೈಪರ್ ಸಾನಿಕ್ ಟೆಕ್ನಾಲಜಿ ಡೆಮೊನ್ಸ್ಟ್ರೇಟರ್ ವೆಹಿಕಲ್ ( ಎಚ್ಎಸ್ಟಿಡಿವಿ) ಅನ್ನು ಪರೀಕ್ಷಿಸಿತ್ತು.
4. ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನದಲ್ಲಿ ಭಾರತದ ಸಾಮರ್ಥ್ಯವು ಉನ್ನತಮಟ್ಟಕ್ಕೇರಿರುವುದನ್ನು ಹೈಪರ್ ಸಾನಿಕ್ ಕ್ಷಿಪಣಿಯ ಪ್ರಾಯೋಗಿಕ ಹಾರಾಟವು ಸಾಬೀತುಪಡಿಸಿದೆ. ಮಿಲಿಟರಿ ತಂತ್ರಜ್ಞಾನ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳ ಸಾಲಿಗೆ ಸೇರ್ಪಡೆಗೊಂಡಿದೆ.
5. ಚೀನಾ, ರಶ್ಯ ಹಾಗೂ ಅಮೆರಿಕ ದೇಶಗಳು ಮಾತ್ರವೇ ಈವರೆಗೆ ಹೈಪರ್ ಸಾನಿಕ್ ಕ್ಷಿಪಣಿಯನ್ನು ಹೊಂದಿದ ರಾಷ್ಟ್ರಗಳಾಗಿದ್ದು ಇದೀಗ ಭಾರತವು ಅವುಗಳ ಸಾಲಿಗೆ ಸೇರ್ಪಡೆಗೊಂಡಿದೆ.