ಭಾರತೀಯ ಸೇನೆಯಿಂದ ಟ್ಯಾಂಕರ್ ನಿರೋಧಕ ಕ್ಷಿಪಣಿ ವ್ಯವಸ್ಥೆಯ ಯಶಸ್ವಿ ಪರೀಕ್ಷೆ
PC : NDTV
ಹೊಸದಿಲ್ಲಿ: ದೇಶಿ ನಿರ್ಮಿತ ಮಾನವ ಚಾಲಿತ ಟ್ಯಾಂಕರ್ ನಿರೋಧಕ ಕ್ಷಿಪಣಿ (ಎಂಪಿಎಟಿಜಿಎಂ) ಶಸ್ತ್ರಾಸ್ತ್ರ ವ್ಯವಸ್ಥೆಯ ಕ್ಷೇತ್ರ ಪರೀಕ್ಷೆಯನ್ನು ಭಾರತೀಯ ಸೇನೆ ಯಶಸ್ವಿಯಾಗಿ ನಡೆಸಿದೆ.
ಈ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ವಿನ್ಯಾಸ ಹಾಗೂ ಅಭಿವೃದ್ಧಿಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಒಟ್ಟು ವ್ಯವಸ್ಥೆ ಎಂಪಿಎಟಿಜಿಎಂ, ಉಡಾವಕ, ಗುರಿ ಸ್ವಾಧೀನ ಸಾಧನ ಹಾಗೂ ಅಗ್ನಿ ನಿಯಂತ್ರಣ ಘಟಕಗಳನ್ನು ಹೊಂದಿದೆ.
ಈ ವ್ಯವಸ್ಥೆಯ ಯಶಸ್ವಿ ಪರೀಕ್ಷೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್ಡಿಒ ಹಾಗೂ ಭಾರತೀಯ ಸೇನೆಯನ್ನು ಅಭಿನಂದಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಆಧರಿತ ರಕ್ಷಣಾ ವ್ಯವಸ್ಥೆ ಅಭಿವೃದ್ಧಿಯಲ್ಲಿ ಆತ್ಮ ನಿರ್ಬರ ಸಾಧನೆಯತ್ತ ಇದು ಒಂದು ಪ್ರಮುಖ ಹೆಜ್ಜೆ ಎಂದು ಅವರು ಹೇಳಿದ್ದಾರೆ.
ತಂತ್ರಜ್ಞಾನವನ್ನು ಹೆಚ್ಚಿನ ಶ್ರೇಷ್ಠತೆಯೊಂದಿಗೆ ಸಾಬೀತುಪಡಿಸುವ ಉದ್ದೇಶದಿಂದ ಎಂಪಿಎಟಿಸಿ ಶಸ್ತ್ರಾಸಸ್ತ್ರ ವ್ಯವಸ್ಥೆಯನ್ನು ಹಲವು ಬಾರಿ ವಿವಿಧ ಹಾರಾಟ ಸಂಯೋಜನೆಯಲ್ಲಿ ಕ್ಷೇತ್ರ ಮೌಲ್ಯಮಾಪನ ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
‘‘ಸಿಡಿತಲೆಯ ಹಾರಾಟ ಪರೀಕ್ಷೆಯನ್ನು ಪೋಖ್ರನ್ ಉಡಾವಣಾ ವಲಯದಲ್ಲಿ ಎಪ್ರಿಲ್ 13ರಂದು ಯಶಸ್ವಿಯಾಗಿ ನಡೆಸಲಾಗಿದೆ. ಕ್ಷಿಪಣಿ ಹಾಗೂ ಸಿಡಿತಲೆಯ ಕಾರ್ಯಕ್ಷಮತೆ ಗಮನಾರ್ಹ ಎಂಬುದು ಕಂಡು ಬಂದಿದೆ’’ ಎಂದು ಅದು ಹೇಳಿದೆ.
ಈ ಆಯುಧ ವ್ಯವಸ್ಥೆ ಹಗಲು ಹಾಗೂ ರಾತ್ರಿ ಎರಡೂ ಸಂದರ್ಭಗಳಲ್ಲಿ ಕಾರ್ಯಾಚರಣೆಗೆ ಸುಸಜ್ಜಿತವಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.