ತನ್ನ ಹಳೆಯ ವಾಸ್ತವ್ಯಕ್ಕೆ ಮರಳಿದ ಗ್ರಾಮದಲ್ಲಿ ಅಡ್ಡಾಡುತ್ತಿದ್ದ ಸುಂದರ ಬನದ ಹುಲಿ
.ಸಾಂದರ್ಭಿಕ ಚಿತ್ರ | PC : PTI
ಕೋಲ್ಕತ್ತಾ: ಎರಡು ದಿನಗಳ ಕಾಲ ಅರಣ್ಯ ಸಿಬ್ಬಂದಿಗಳು ಬೆನ್ನು ಬಿದ್ದಿದ್ದರಿಂದ, ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸುಂದರಬನ ಹುಲಿ ಸಂರಕ್ಷಿತಾರಣ್ಯದ ಮಧ್ಯ ನೆಲೆಯಿಂದ ಹೊರ ಬಂದು ಸಮೀಪದ ಗ್ರಾಮದಲ್ಲಿ ಅಡ್ಡಾಡುತ್ತಿದ್ದ ಹುಲಿಯೊಂದು ಬುಧವಾರ ಬೆಳಗ್ಗೆ ತನ್ನ ಹಳೆಯ ವಾಸ್ತವ್ಯಕ್ಕೆ ಮರಳಿದೆ.
“ಸೋಮವಾರದಿಂದ ಕುಲ್ತಲಿ ಬ್ಲಾಕ್ ನ ಮೈಪಿತ್ ನ ಮಾವಿನ ತೋಪಿನಲ್ಲಿ ಅಡ್ಡಾಡುತ್ತಿದ್ದ ವಯಸ್ಕ ಹುಲಿಯೊಂದು ಅಜ್ಮಲ್ ಮರಿಯಲ್ಲಿನ ಸಂರಕ್ಷಿತಾರಣ್ಯದ ಕೇಂದ್ರ ವಲಯಲ್ಲಿನ ತನ್ನ ಹಳೆಯ ವಾಸ್ತವ್ಯಕ್ಕೆ ಮರಳಿದೆ” ಎಂದು ಸುಂದರಬನ ಸಂರಕ್ಷಿತಾರಣ್ಯ ಜೈವಿಕ ವೃತ್ತದ ನಿರ್ದೇಶಕ ನೀಲಾಂಜನ್ ಮಲ್ಲಿಕ್ PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
“ಹುಲಿಯು ತೊರೆಯಲ್ಲಿ ಈಜಿಕೊಂಡು ಮೈಪಿತ್ ನ ಬೈಕುಂಠಾಪುರ್ ಅರಣ್ಯ ಪ್ರದೇಶವನ್ನು ತಲುಪಿದ್ದು, ಬುಧವಾರ ಹಳೆಯ ಮಾರ್ಗದ ಮೂಲಕ ಅಜ್ಮಲ್ ಮರಿಗೆ ತಲುಪಿದೆ. ಇದರಿಂದ ನಾವು ನಿರಾಳರಾಗಿದ್ದೇವೆ” ಎಂದು ಅವರು ಹೇಳಿದ್ದಾರೆ.
ಹುಲಿಯು ಗಮನಾರ್ಹ ಜನಸಂಖ್ಯೆಯುಳ್ಳ ಪಕ್ಕದ ಗ್ರಾಮಗಳಿಗೆ ತಲುಪುವುದನ್ನು ತಡೆಯಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಆ ಪ್ರದೇಶದ ಸುತ್ತಲಿನ 1.5 ಕಿಮೀಗುಂಟ ನೈಲಾನ್ ಬಲೆಯ ಬೇಲಿ ಹಾಕಿದ್ದರು. 100 ಮಂದಿ ಅರಣ್ಯ ಸಿಬ್ಬಂದಿಗಳು ಹಾಗೂ ಸ್ಥಳೀಯರ ತಂಡವೊಂದು ಹುಲಿಯ ದಾರಿಯಲ್ಲಿ ಬೆಂಕಿ ಹಚ್ಚಿ, ಪಟಾಕಿಗಳನ್ನು ಸಿಡಿಸುವ ಮೂಲಕ ಕಳೆದ ಎರಡು ದಿನಗಳಿಂದ ಅರಣ್ಯದ ಮಧ್ಯ ವಲಯಕ್ಕೆ ಹುಲಿಯನ್ನು ಹಿಂದಕ್ಕೆ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ.