ಭಾರತೀಯ ಸೇನೆಗೆ ಇಲೆಕ್ಟ್ರಾನಿಕ್ ಫ್ಯೂಝ್ ಪೂರೈಕೆ ; ಬಿಇಎಲ್ ಜೊತೆ 5 ಸಾವಿರ ಕೋಟಿ ರೂ. ಒಪ್ಪಂದಕ್ಕೆ ರಕ್ಷಣಾ ಇಲಾಖೆ ಅಂಕಿತ
Photo: ANI
ಹೊಸದಿಲ್ಲಿ: ಭಾರತೀಯ ಸೇನೆಗೆ 10 ವರ್ಷಗಳವರೆಗೆ ಇಲೆಕ್ಟ್ರಾನಿಕ್ ಫ್ಯೂಜ್ ಗಳನ್ನು ಖರೀದಿಸುವ ಒಡಂಬಡಿಕೆಗೆ ಪುಣೆಯ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಶುಕ್ರವಾರ ಸಹಿಹಾಕಿದೆ. ಭಾರತೀಯ ಸೇನೆಯ ಫಿರಂಗಿದಳದ ದೀರ್ಘವ್ಯಾಪ್ತಿಯ ದಾಳಿ ಸಾಮರ್ಥ್ಯವನ್ನು ಬಲಪಡಿಸುವ ಪ್ರಯತ್ನವಾಗಿ ಸಚಿವಾಲಯವು ಈ ಒಪ್ಪಂದವನ್ನು ಏರ್ಪಡಿಸಿಕೊಂಡಿದೆ. ಒಪ್ಪಂದದ ಒಟ್ಟು ಮೊತ್ತವು 5336.25 ಕೋಟಿ ರೂ. ಆಗಿದೆ.
ಇದೊಂದು ಮೈಲುಗಲ್ಲಿನ ಒಪ್ಪಂದವೆಂದು ರಕ್ಷಣಾ ಸಚಿವಾಲಯವು ಬಣ್ಣಿಸಿದೆ. ಭಾರತೀಯ ಕೈಗಾರಿಕೆಯಿಂದ ಭಾರತೀಯ ಸೇನೆಗೆ ಶಸ್ತ್ರಾಸ್ತ್ರಗಳ ಉತ್ಪಾದನೆಗೆ ಒತ್ತು ನೀಡುವ ಕೇಂದ್ರ ಸರಕಾರದ ಉಪಕ್ರಮದಡಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಆಮದುಗಳನ್ನು ಕನಿಷ್ಠಗೊಳಿಸಲು, ಶಸ್ತ್ರಾಸ್ತ್ರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು, ಜಟಿಲವಾದ ತಂತ್ರಜ್ಞಾನಗಳನ್ನು ಪಡೆಯಲು ಹಾಗೂ ಪೂರೈಕೆ ಸರಪಣಿಗೆ ವ್ಯವಸ್ಥೆಗೆ ಅಡಚಣೆಯುಂಟಾಗದಂತೆ ದಾಸ್ತಾನುಗಳನ್ನು ಲಭ್ಯವಾಗುವುದನ್ನು ಖಾತರಿಪಡಿಸುವುದಕ್ಕಾಗಿ ಈ ಒಪ್ಪಂದವನ್ನು ಏರ್ಪಡಿಸಲಾಗಿದೆ ಎಂದರು.
ಇಲೆಕ್ಟಾನಿಕ್ ಫ್ಯೂಜ್ ಗಳು ಭಾರೀ ಗಾತ್ರದ ಫಿರಂಗಿ ತೋಪುಗಳಲ್ಲಿ ಮದ್ದುಗುಂಡುಗಳು ಸ್ಫೋಟಗೊಳ್ಳುವಂತೆ ಮಾಡುವ ಸಾಧನ(ಎಕ್ಸ್ಪ್ಲೋಡರ್)ಗಳಾಗಿವೆ, ಬಿಇಎಲ್ ಪುಣೆಯಲ್ಲಿರುವ ತನ್ನ ಕಾರ್ಖಾನೆಯಲ್ಲಿ ಹಾಗೂ ನಾಗಪುರದಲ್ಲಿ ತಲೆಯೆತ್ತಲಿರುವ ಘಟಕದಲ್ಲಿ ಇಲೆಕ್ಟ್ರಾನಿಕ್ ಫ್ಯೂಜ್ ಗಳನ್ನು ತಯಾರಿಸಲಿದೆ. ಈ ಯೋಜನೆಯು ಒಂದೂವರೆ ಲಕ್ಷ ಮಂದಿಗೆ ಉದ್ಯೋಗವನ್ನು ಒದಗಿಸಲಿದೆ. ಶಸ್ತ್ರಾಸ್ತ್ರ ಉತ್ಪಾದನಾ ಕ್ಷೇತ್ರದಲ್ಲಿ ಲಘು, ಸಣ್ಣ , ಮಧ್ಯಮ ಕೈಗಾರಿಕೆ (ಎಂಎಸ್ಎಂಇ)ಗಳು ಸೇರಿದಂತೆ ಭಾರತೀಯ ಕೈಗಾರಿಕೆಗಳ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲಿದೆ