ಕೇಂದ್ರದಲ್ಲಿ ಸರ್ಕಾರ ರಚನೆಗೆ ಇಂಡಿಯಾ ಮೈತ್ರಿಕೂಟಕ್ಕೆ ಬಾಹ್ಯ ಬೆಂಬಲ: ಮಮತಾ ಬ್ಯಾನರ್ಜಿ
Photo:PTI
ಕೊಲ್ಕತ್ತಾ: ಇಂಡಿಯಾ ಮೈತ್ರಿಕೂಟಕ್ಕೆ ಕೇಂದ್ರದಲ್ಲಿ ಸರ್ಕಾರ ರಚನೆಗೆ ತೃಣಮೂಲ ಕಾಂಗ್ರೆಸ್ ಪಕ್ಷ ಬಾಹ್ಯ ಬೆಂಬಲ ನೀಡಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಬುಧವಾರ ಘೋಷಿಸಿದ್ದಾರೆ.
"ಲೋಕಸಭೆಯಲ್ಲಿ 400ಕ್ಕಿಂತ ಅಧಿಕ ಸ್ಥಾನಗಳನ್ನು ಗೆಲ್ಲುವುದಾಗಿ ಬಿಜೆಪಿ ಹೇಳಿಕೊಳ್ಳುತ್ತಿದೆ. ಆದರೆ ಇದು ಅಸಾಧ್ಯ ಎಂದು ಜನ ಹೇಳುತ್ತಿದ್ದಾರೆ. ಬಿಜೆಪಿ ಕಳ್ಳರಿಂದ ತುಂಬಿದ ಪಕ್ಷ ಎನ್ನುವುದನ್ನು ಇಡೀ ದೇಶ ಅರ್ಥ ಮಾಡಿಕೊಂಡಿದೆ. ಕೇಂದ್ರದಲ್ಲಿ ಸರ್ಕಾರ ರಚನೆಗೆ ಇಂಡಿಯಾ ಮೈತ್ರಿಕೂಟಕ್ಕೆ ಬಾಹ್ಯ ಬೆಂಬಲ ನೀಡಲಿದ್ದೇವೆ" ಎಂದು ಹೂಗ್ಲಿಯಲ್ಲಿ ನಡೆದ ರ್ಯಾಲಿಯಲ್ಲಿ ಅವರು ಸ್ಪಷ್ಟಪಡಿಸಿದರು.
"ನಾವು ಅವರಿಗೆ ಬೆಂಬಲ ನೀಡುತ್ತೇವೆ. ಆದ್ದರಿಂದ ಬಂಗಾಳದಲ್ಲಿ ನಮ್ಮ ತಾಯಂದಿರಿಗೆ, ಸಹೋದರಿಯರಿಗೆ ಯಾವ ಸಮಸ್ಯೆಯೂ ಆಗದು. ಅಂತೆಯೇ 100 ದಿನಗಳ ಉದ್ಯೋಗ ಯೋಜನೆಯಲ್ಲಿ ಕೆಲಸ ಮಾಡುವವರಿಗೂ ಸಮಸ್ಯೆ ಎದುರಾಗದು" ಎಂದು ಹೇಳಿದರು.
ಆದರೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಎಂದಿಗೂ ಸಿಪಿಎಂ ಹಾಗೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಿಲ್ಲ. ಏಕೆಂದರೆ ಈ ಪಕ್ಷಗಳು ಬಿಜೆಪಿಗೆ ನೆರವಾಗುತ್ತಿವೆ ಎಂದು ಆಪಾದಿಸಿದರು. "ರಾಜ್ಯದಲ್ಲಿ ಸಿಪಿಎಂ ಹಾಗೂ ಕಾಂಗ್ರೆಸ್ ಪಕ್ಷವನ್ನು ಪರಿಗಣಿಸಬೇಡಿ. ಏಕೆಂದರೆ ಅವರು ನಮ್ಮೊಂದಿಗೆ ಇಲ್ಲ. ಅವರು ಇಲ್ಲಿ ಬಿಜೆಪಿ ಜತೆಗಿದ್ದಾರೆ. ನಾನು ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಬಗ್ಗೆ ಮಾತನಾಡುತ್ತಿದ್ದೇನೆ" ಎಂದು ದೀದಿ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.
ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದರೂ, ಬಂಗಾಳದಲ್ಲಿ ಟಿಎಂಸಿ ಏಕಾಂಗಿಯಾಗಿ ಹೋರಾಡುತ್ತಿದೆ. ಎಡಪಕ್ಷಗಳು ಹಾಗೂ ಕಾಂಗ್ರೆಸ್ ಇಲ್ಲಿ ಸ್ಥಾನ ಹೊಂದಾಣಿಕೆ ಮಾಡಿಕೊಂಡಿದ್ದು, ಎಡಪಕ್ಷಗಳು 30 ಹಾಗೂ ಕಾಂಗ್ರೆಸ್ 12 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ.
2004ರಲ್ಲಿ ವಾಜಪೇಯಿ ಸರ್ಕಾರದ ಸೋಲನ್ನು ನೆನಪಿಸಿದ ಅವರು, "ಅವರು ಹೇಗಾದರೂ ಗೆಲ್ಲಬೇಕು ಎಂಬ ಹವಣಿಕೆಯಲ್ಲಿದ್ದಾರೆ. ಆದರೆ ಅವರು ಸೋಲಬೇಕು ಎನ್ನುವ ವಿಚಾರದಲ್ಲಿ ದೇಶದ ಧ್ವನಿ ಕೂಡಾ ಒಗ್ಗಟ್ಟಾಗಿದೆ. 2004ರ ಚುನಾವಣೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಸೋಲನ್ನು ಯಾರೂ ಅಂದಾಜಿಸಿರಲಿಲ್ಲ. ಇಂಡಿಯಾ ಶೈನಿಂಗ್ ಎಂಬ ಘೋಷಣೆಯನ್ನು ಅವರು ನೀಡಿದರು. ಆದರೆ ಜನ ಅವರಿಗೆ ಮತ ಹಾಕಲಿಲ್ಲ ಎಂದು ಹೇಳಿದರು.