ಶಂಭುಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ಕುಂದು ಕೊರತೆ ಪರಿಹರಿಸಲು ಸಮಿತಿ ರಚಿಸಿದ ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್ | PC : PTI
ಹೊಸದಿಲ್ಲಿ: ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆ ಮಾತುಕತೆ ನಡೆಸಿ ಕುಂದುಕೊರತೆಗಳನ್ನು ಪರಿಹರಿಸಲು ಸುಪ್ರೀಂ ಕೋರ್ಟ್ ಸೋಮವಾರ ಉನ್ನತಾಧಿಕಾರಿಗಳ ಸಮಿತಿಯನ್ನು ರಚಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಸಮಿತಿಯ ನೇತೃತ್ವವನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ನವಾಬ್ ಸಿಂಗ್ ವಹಿಸಲಿದ್ದಾರೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಸಮಿತಿಯ ಮೊದಲ ಸಭೆಯನ್ನು ಒಂದು ವಾರದೊಳಗೆ ನಡೆಸುವಂತೆ ಸೂಚಿಸಿದೆ.
ಐದು ತಿಂಗಳಿನಿಂದ ಸಾರ್ವಜನಿಕ ಸಾರಿಗೆಗೆ ಮುಚ್ಚಲಾಗಿರುವ ಶಂಭು ಗಡಿಯನ್ನು ತೆರೆಯಲು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಜು.10ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿದ್ದ ಹರ್ಯಾಣ ಸರ್ಕಾರದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
ಈ ಹಿಂದೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾನೂನನ್ನು ಜಾರಿಗೆ ತರಲು ಆಗ್ರಹಿಸಿ ರೈತರು ಪ್ರತಿಭಟನೆಯನ್ನು ನಡೆಸಿದ್ದರು. ರೈತರು ದೆಹಲಿಗೆ ಪ್ರತಿಭಟನಾ ಮೆರವಣಿಗೆ ನಡೆಸುವುದನ್ನು ತಡೆಯಲು ಫೆಬ್ರವರಿಯಲ್ಲಿ ಗಡಿಯಲ್ಲಿ ಭಾರಿ ದಿಗ್ಬಂಧನವನ್ನು ವಿಧಿಸಲಾಗಿತ್ತು. ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ್ದರು.