ಸುಪ್ರೀಂ ಕೋರ್ಟ್ | ಬೇಸಿಗೆಯಲ್ಲಿ ವಕೀಲರಿಗೆ ಕೋಟು, ಗೌನ್ ಧರಿಸಿರುವುದರಿಂದ ವಿನಾಯತಿ ಕೋರಿದ್ದ ಪಿಐಎಲ್ ವಜಾ
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ನ್ಯಾಯಾಲಯಗಳಲ್ಲಿ ವಸ್ತ್ರ ಸಂಹಿತೆಯೊಂದು ಇರಬೇಕು ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್, ಬೇಸಿಗೆಯಲ್ಲಿ ವಕೀಲರು ಕೋಟು, ಗೌನ್ ಧರಿಸುವುದರಿಂದ ವಿನಾಯಿತಿ ನೀಡಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ. ನ್ಯಾಯಾಲಯಗಳಲ್ಲಿ ಭಾರತದ ಸಾಂಪ್ರದಾಯಿಕ ಉಡುಗೆಯಾದ ಕುರ್ತಾ-ಪೈಜಾಮ ಧರಿಸುವ ಅವಕಾಶ ನೀಡಲು ಸಾಧ್ಯವಿಲ್ಲ ಎಂದೂ ಅದು ಹೇಳಿದೆ.
“ಕಟ್ಟಕಡೆಯದಾಗಿ ಇದು ಶಿಷ್ಟಾಚಾರಕ್ಕೆ ಸಂಬಂಧಿಸಿದ್ದು. ನೀವು ಸೂಕ್ತ ಉಡುಗೆ ಧರಿಸಿರಬೇಕು. ನೀವು ಏನನ್ನಾದರೂ ಧರಿಸಿರಲೇಬೇಕು. ನೀವು ಕುರ್ತಾ-ಪೈಜಾಮ, ಟೀಶರ್ಟ್ ಗಳೂ ಕೂಡಾ ಉಡುಗೆಗಳು ಎಂದು ವಾದಿಸಲು ಸಾಧ್ಯವಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಜೆ.ಬಿ.ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾರನ್ನು ಒಳಗೊಂಡಿದ್ದ ನ್ಯಾಯಪೀಠವು ಅಭಿಪ್ರಾಯ ಪಟ್ಟಿತು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದ ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಅವರಿಗೆ ಈ ಕುರಿತು ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ ನ್ಯಾಯಪೀಠವು, ಈ ಅರ್ಜಿಯ ಕುರಿತು ಅದು ತನ್ನ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದೆ ಎಂದೂ ಹೇಳಿತು.
ಬೇಸಿಗೆಯಲ್ಲಿ ವಕೀಲರಿಗೆ ಕೋಟು ಮತ್ತು ಗೌನ್ ಧರಿಸಿರುವುದರಿಂದ ವಿನಾಯಿತಿ ನೀಡಬಹುದು ಎಂದು ವಕೀಲ ತ್ರಿಪಾಠಿ ವಾದಿಸಿದಾಗ, ರಾಜಸ್ಥಾನ ಮತ್ತು ಬೆಂಗಳೂರಿನಲ್ಲಿ ಹವಾಮಾನವು ಒಂದೇ ಬಗೆಯದಾಗಿರುವುದಿಲ್ಲ. ಈ ಕುರಿತು ಸಂಬಂಧಿತ ಬಾರ್ ಕೌನ್ಸಿಲ್ ಗಳು ನಿರ್ಧಾರ ಕೈಗೊಳ್ಳಲಿ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಸೂಚಿಸಿದರು.