ನಾಗಾಲ್ಯಾಂಡ್ ನಾಗರಿಕರ ಹತ್ಯಾಕಾಂಡ |30 ಸೇನಾ ಸಿಬ್ಬಂದಿಗಳ ವಿರುದ್ಧ ಪ್ರಕರಣ ಮುಕ್ತಾಯ ಮಾಡಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ : 2021ರಲ್ಲಿ ನಾಗಾಲ್ಯಾಂಡ್ನಲ್ಲಿ ಮಿಲಿಟರಿ ಕಾರ್ಯಾಚರಣೆಯ ಸಂದರ್ಭ 13 ನಾಗರಿಕರನ್ನು ಕೊಂದಿದ್ದ ಆರೋಪ ಎದುರಿಸುತ್ತಿದ್ದ ಭಾರತೀಯ ಸೇನೆಯ 30 ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್ ಕಲಾಪಗಳನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಮುಕ್ತಾಯಗೊಳಿಸಿದೆ.
ಆದರೆ ಸೇನಾ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮಕ್ಕೆ ಕೇಂದ್ರವು ಅನುಮತಿ ನೀಡಿದರೆ ತಾರ್ಕಿಕ ಅಂತ್ಯವನ್ನು ಕಂಡುಕೊಳ್ಳಲು ಪ್ರಕರಣದ ವಿಚಾರಣೆಯನ್ನು ಮುಂದುವರಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ವಿಕ್ರಮನಾಥ ಮತ್ತು ಪಿ.ಬಿ.ವರಾಳೆ ಅವರ ಪೀಠವು ಸ್ಪಷ್ಟಪಡಿಸಿತು.
ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯಡಿ ಕರ್ತವ್ಯದಲ್ಲಿರುವಾಗ ಸೇನಾ ಸಿಬ್ಬಂದಿಗಳ ಕಾರ್ಯಾಚರಣೆ ವಿರುದ್ಧ ಕಾನೂನು ಕ್ರಮವನ್ನು ಆರಂಭಿಸಲು ಕೇಂದ್ರ ಸರಕಾರದ ಅನುಮತಿಯು ಅಗತ್ಯವಾಗುತ್ತದೆ. ನಾಗಾಲ್ಯಾಂಡ್ನಲ್ಲಿ ಈ ಕಾಯ್ದೆಯು ಜಾರಿಯಲ್ಲಿದೆ.
2021,ಡಿ.4ರಂದು ಸಂಜೆ ಮೊನ್ ಜಿಲ್ಲೆಯ ತಿರುನಿಂದ ಓಟಿಂಗ್ ಗ್ರಾಮಕ್ಕೆ ಕಲ್ಲಿದ್ದಲು ಗಣಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಪಿಕಪ್ ವ್ಯಾನ್ ಮೇಲೆ ಸೇನೆಯ 21 ಪ್ಯಾರಾ ಸ್ಪೆಷಲ್ ಫೋರ್ಸ್ ಗುಂಡಿನ ದಾಳಿ ನಡೆಸಿದ್ದು, ಆರು ಜನರು ಸಾವನ್ನಪ್ಪಿದ್ದರು. ಸೇನೆಯು ಅವರನ್ನು ಬಂಡುಕೋರರೆಂದು ತಪ್ಪಾಗಿ ಭಾವಿಸಿತ್ತು.
ಗುಂಡಿನ ದಾಳಿಯನ್ನು ವಿರೋಧಿಸಿ ಪ್ರತಿಭಟನೆಗಿಳಿದಿದ್ದ ಸ್ಥಳೀಯರ ಗುಂಪು ಎರಡು ಸೇನಾ ವಾಹನಗಳಿಗೆ ಬೆಂಕಿ ಹಚ್ಚಿತ್ತು. ಯೋಧರು ಮತ್ತೆ ಗುಂಡು ಹಾರಿಸಿದಾಗ ಇನ್ನೂ ಏಳು ನಾಗರಿಕರು ಮೃತಪಟ್ಟಿದ್ದರು.
ತನ್ನ ಆದೇಶವು ಸೇನೆಯು ಸಿಬ್ಬಂದಿಗಳ ವಿರುದ್ಧ ಶಿಸ್ತುಕ್ರಮಗಳನ್ನು ಕೈಗೊಳ್ಳುವುದನ್ನು ತಡೆಯುವುದಿಲ್ಲ ಎಂದು ಮಂಗಳವಾರ ಸರ್ವೋಚ್ಚ ನ್ಯಾಯಾಲಯವು ಹೇಳಿತು.
ಸೇನಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಲು ಕೇಂದ್ರವು ನಿರಾಕರಿಸಿದೆ.