ಸಾಲ ವಸೂಲಾತಿ ನ್ಯಾಯಾಧಿಕರಣಗಳಿಂದ ದತ್ತಾಂಶ ಕೋರಿದ ಕೇಂದ್ರ ಸರಕಾರಕ್ಕೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : https://www.sci.gov.in/
ಹೊಸದಿಲ್ಲಿ: ನ್ಯಾಯಾಧಿಕರಣದ ಆದೇಶದ ಆಧಾರದಲ್ಲಿ ಸಾಲ ವಸೂಲಾತಿ ನ್ಯಾಯಾಧಿಕರಣಗಳು ಮಾಡಿರುವ ಸಾಲ ವಸೂಲಾತಿಯ ದತ್ತಾಂಶಗಳನ್ನು ಒದಗಿಸುವಂತೆ ಕೋರಿರುವ ಕೇಂದ್ರ ಹಣಕಾಸು ಸಚಿವಾಲಯವನ್ನು ಸೋಮವಾರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಈ ಕುರಿತು ವಿವರಣೆ ಕೇಳಿದೆ.
ಹಣಕಾಸು ಸಚಿವಾಲಯವು ಸಾಲ ವಸೂಲಾತಿ ನ್ಯಾಯಾಧಿಕರಣದ ನ್ಯಾಯಾಂಗ ಸಿಬ್ಬಂದಿಗಳನ್ನು ತನ್ನ ಅಧೀನ ಅಧಿಕಾರಿಗಳಂತೆ ನಡೆಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾ. ಅಭಯ್ ಎಸ್. ಓಕಾ ಹಾಗೂ ನ್ಯಾ. ಆಗಸ್ಟಿನ್ ಜಾರ್ಜ್ ಮಾಸಿಹ್, ಕಡಿಮೆ ಅವಧಿಯಲ್ಲಿ ಭಾರಿ ಪ್ರಮಾಣದ ದತ್ತಾಂಶಗಳನ್ನು ಸಂಗ್ರಹಿಸಲು ನ್ಯಾಯಾಧಿಕರಣಗಳನ್ನು ಕೋರಿರುವ ಕುರಿತು ವಿವರಣೆ ನೀಡಬೇಕು ಎಂದು ಸೂಚಿಸಿದೆ.
“ನೀವು ನ್ಯಾಯಾಂಗ ಸಿಬ್ಬಂದಿಗಳನ್ನು ನಿಮ್ಮ ಅಧೀನ ಅಧಿಕಾರಿಗಳೇನೋ ಎಂಬಂತೆ ನಡೆಸಿಕೊಳ್ಳುತ್ತಿದ್ದೀರಿ. ನಾವು ಸರಕಾರದಿಂದ ಕ್ಷಮೆಯನ್ನು ನಿರೀಕ್ಷಿಸುತ್ತೇವೆ. ಇಷ್ಟು ದೊಡ್ಡ ಪ್ರಮಾಣದ ದತ್ತಾಂಶವನ್ನು ಕೇವಲ ಮೂರು ದಿನಗಳೊಳಗಾಗಿ ಒದಗಿಸಬೇಕು ಎಂದು ಕೋರಲಾಗಿದೆ. ನಿಮಗೆ ದತ್ತಾಂಶಗಳನ್ನು ಸಂಗ್ರಹಿಸಬೇಕಿದ್ದರೆ, ಸಾಲ ವಸೂಲಾತಿ ನ್ಯಾಯಾಧಿಕರಣಕ್ಕೆ ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿಗಳನ್ನು ಒದಗಿಸಬೇಕು. ಇದನ್ನು ಸಹಿಸಲು ಸಾಧ್ಯವಿಲ್ಲ. ಈ ಪೈಕಿ ಕೆಲವು ನ್ಯಾಯಾಂಗ ಅಧಿಕಾರಿಗಳಾಗಿದ್ದು, ನೀವು ಅವರನ್ನು ನಿಮ್ಮ ಅಧೀನ ಅಧಿಕಾರಿಗಳಂತೆ ನಡೆಸಿಕೊಳ್ಳುತ್ತಿದ್ದೀರಿ” ಎಂದು ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು.
ಸಾಲ ವಸೂಲಾತಿ ನ್ಯಾಯಾಧಿಕರಣಗಳು ಇಂತಹ ಕೆಲಸಗಳನ್ನು ಮಾಡುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿತು.
“ಸಂಬಂಧಿತ ಇಲಾಖೆಯ ಕಾರ್ಯದರ್ಶಿಯು ಈ ನ್ಯಾಯಾಲಯದ ಆದೇಶ ಹಾಗೂ ದಾಖಲೆಯಲ್ಲಿರುವ ವಿಷಯಗಳನ್ನು ಪರಿಶೀಲಿಸಿದ ನಂತರ, ಈ ಕುರಿತು ಸಂಪೂರ್ಣ ಗಮನ ಹರಿಸಿ, ಸೂಕ್ತ ಪ್ರಮಾಣ ಪತ್ರ ಸಲ್ಲಿಕೆಯನ್ನು ಖಾತರಿಗೊಳಿಸಬೇಕು” ಎಂದು ನ್ಯಾಯಪೀಠ ಸೂಚಿಸಿತು.
ಸಾಲ ವಸೂಲಾತಿ ನ್ಯಾಯಾಧಿಕರಣಗಳನ್ನು ಹೇಗೆ ಕೇಂದ್ರ ಸರಕಾರದ ಇಲಾಖೆಗಳಂತೆ ನಡೆಸಿಕೊಳ್ಳಲು ಸಾಧ್ಯ ಎಂದು ವಿವರಿಸುವಂತೆ ಹಣಕಾಸು ಸಚಿವಾಲಯದ ವಿಭಾಗಾಧಿಕಾರಿ, ಹಣಕಾಸು ಸೇವೆಗಳ ಇಲಾಖೆಗೆ ಸೆಪ್ಟೆಂಬರ್ 30ರಂದು ಸುಪ್ರೀಂ ಕೊರ್ಟ್ ನೋಟಿಸ್ ಜಾರಿಗೊಳಿಸಿತ್ತು.