ಗುಜರಾತಿನಲ್ಲಿ ಮಸೀದಿಗಳ ನೆಲಸಮ ಯಥಾಸ್ಥಿತಿ ಕಾಯ್ತುಕೊಳ್ಳುವಂತೆ ಆದೇಶಿಸಲು ಸುಪ್ರೀಂ ಕೋರ್ಟ್ ನಿರಾಕರಣೆ
ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ : ಗುಜರಾತ್ನ ಗಿರ್ ಸೋಮನಾಥದಲ್ಲಿರುವ ಮಸೀದಿ ಹಾಗೂ ಇತರ ಕಟ್ಟಡಗಳನ್ನು ಕಾನೂನು ಬಾಹಿರವಾಗಿ ಕೆಡವಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಹಾಗೂ ಕೆ.ವಿ. ವಿಶ್ವನಾಥನ್ ಅವರನ್ನು ಒಳಗೊಂಡ ಪೀಠ ಆರಂಭದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಲು ಒಲವು ತೋರಿಸಿತು. ಆದರೆ, ವಿಚಾರಣೆ ಮುದುವರಿದಂತೆ ಈ ಹಂತದಲ್ಲಿ ಅಂತಹ ಯಾವುದೇ ಆದೇಶದ ಅಗತ್ಯತೆ ಇಲ್ಲ ಎಂದು ಪೀಠ ಹೇಳಿತು.
ಮುಸ್ಲಿಂ ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಆರಂಭದಲ್ಲಿ ಈ ಸೊತ್ತು ವಕ್ಫ್ ಭೂಮಿಯಲ್ಲಿದೆ. ಆದರೆ, ವಿವಾದಿತ ಭೂಮಿಯಲ್ಲಿ ಮೂರನೇ ವ್ಯಕ್ತಿ ಹಕ್ಕುಗಳನ್ನು ಸ್ಥಾಪಿಸುವುದನ್ನು ತಪ್ಪಿಸಲು ಗುಜರಾತ್ ಸರಕಾರಕ್ಕೆ ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಕೋರಿದರು.
ಗುಜರಾತ್ ಸರಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅರ್ಜಿದಾರ ಔಲಿಯಾ-ಏ-ದೀನ್ ಸಮಿತಿ ಹೆಸರಿನಲ್ಲಿ ಯಾವುದೂ ಇರಲಿಲ್ಲ ಹಾಗೂ ಇದು ಸರಕಾರಿ ಭೂಮಿ ಎಂದು ಹೇಳಿದರು.
ಸುಪ್ರೀಂ ಕೋರ್ಟ್ನ ಮಧ್ಯಂತರ ತಡೆ ಹೊರತಾಗಿಯೂ ಹಾಗೂ ಅದರ ಪೂರ್ವಾನುಮತಿ ಇಲ್ಲದೆ ರಾಜ್ಯದಲ್ಲಿರುವ ವಸತಿ ಹಾಗೂ ಧಾರ್ಮಿಕ ಕಟ್ಟಡಗಳನ್ನು ಕಾನೂನು ಬಾಹಿರವಾಗಿ ನೆಲಸಮ ಮಾಡಿರುವುದಕ್ಕೆ ಗುಜರಾತ್ ಆಡಳಿತದ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಪೀಠ ವಿಚಾರಣೆ ನಡೆಸಿತು.