ಸರಕಾರಿ ನೇಮಕಾತಿಗಳಲ್ಲಿ ಅರ್ಹತಾ ನಿಯಮಗಳನ್ನು ಮಧ್ಯದಲ್ಲಿ ಬದಲಿಸುವಂತಿಲ್ಲ: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಸರಕಾರಿ ನೇಮಕಾತಿಗಳಲ್ಲಿ ಅರ್ಹತಾ ನಿಯಮಗಳನ್ನು ನೇಮಕಾತಿ ಪ್ರಕ್ರಿಯೆ ಮಧ್ಯ ಬದಲಿಸಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಗುರುವಾರ ಎತ್ತಿ ಹಿಡಿದಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು,ನೇಮಕಾತಿ ಮಾನದಂಡಗಳನ್ನು ಪ್ರಕ್ರಿಯೆ ಮಧ್ಯದಲ್ಲಿ ಬದಲಿಸುವುದು ಸಮಾನತೆಯ ಹಕ್ಕು ಮತ್ತು ತಾರತಮ್ಯದ ವಿರುದ್ಧ ಹಕ್ಕನ್ನು ಉಲ್ಲಂಘಿಸುತ್ತದೆಯೇ ಎನ್ನುವುದನ್ನು ಪರಿಶೀಲಿಸಿತ್ತು.
ಪೀಠದ ತೀರ್ಪನ್ನು ಬರೆದ ನ್ಯಾ.ಮನೋಜ್ ಮಿಶ್ರಾ ಅವರು, ನೇಮಕಾತಿ ಪ್ರಕ್ರಿಯೆಯ ಆರಂಭದಲ್ಲಿ ಅಸ್ತಿತ್ವದಲ್ಲಿದ್ದ ನಿಯಮಗಳನ್ನು ಅವು ನಿಷ್ಪಕ್ಷ ಮತ್ತು ಸಂವಿಧಾನದ 14ನೇ ವಿಧಿ(ಸಮಾನತೆಯ ಹಕ್ಕು)ಗೆ ಅನುಗುಣವಾಗಿರುವವರೆಗೆ ಬದಲಿಸುವಂತಿಲ್ಲ ಎಂದು ಹೇಳಿದ್ದಾರೆ.
ಆಯ್ಕೆಪಟ್ಟಿಯಲ್ಲಿ ಹೆಸರಿನ ಸೇರ್ಪಡೆಯು ನೇಮಕಾತಿಯ ಸಂಪೂರ್ಣ ಹಕ್ಕನ್ನು ಖಾತರಿಪಡಿಸುವುದಿಲ್ಲ ಎಂದು ಅಭಿಪ್ರಾಯಿಸಿರುವ ಪೀಠವು, ಆದರೆ ನೇಮಕಾತಿ ಪ್ರಾಧಿಕಾರವು ಆಯ್ಕೆ ಪಟ್ಟಿಯಲ್ಲಿ ಹೆಸರಿಸಲಾದ ಅಭ್ಯರ್ಥಿಗಳನ್ನು ನೇಮಕಾತಿ ಮಾಡದಿರುವುದಕ್ಕೆ ಸಮಂಜಸವಾದ ಕಾರಣಗಳನ್ನು ತೋರಿಸಬೇಕು ಎಂದು ಹೇಳಿದೆ.
ಪೀಠವು ಕಳೆದ ವರ್ಷದ ಜುಲೈನಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಪ್ರಕರಣವು 2009ರಲ್ಲಿ ರಾಜಸ್ಥಾನ ಉಚ್ಚ ನ್ಯಾಯಾಲಯದ 13 ಅನುವಾದಕರ ಹುದ್ದೆಗಳಿಗೆ ನೇಮಕಾತಿಗೆ ಸಂಬಂಧಿಸಿದೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನಗಳ ಬಳಿಕ ಉಚ್ಚ ನ್ಯಾಯಾಲಯವು ಕಟ್-ಆಫ್ ಅಂಕಗಳನ್ನು 75ಕ್ಕೆ ಹೆಚ್ಚಿಸಿತ್ತು. ಪರಿಣಾಮವಾಗಿ ಕೇವಲ ಮೂವರು ಅಭ್ಯರ್ಥಿಗಳು ಅರ್ಹರಾಗಿದ್ದರು.