‘‘ರಾಜಿ’’ ಆಧಾರದಲ್ಲಿ ಲೈಂಗಿಕ ಕಿರುಕುಳ ಪ್ರಕರಣ ರದ್ದುಗೊಳಿಸಲಾಗದು : ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ : ದೂರುದಾರೆ ಮತ್ತು ಆರೋಪಿಯ ನಡುವೆ ಆಗುವ ‘ರಾಜಿ’ಯ ಆಧಾರದಲ್ಲಿ ಲೈಂಗಿಕ ಕಿರುಕುಳ ಪ್ರಕರಣವನ್ನು ವಜಾಗೊಳಿಸಲಾಗದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಇಂಥ ಒಂದು ಲೈಂಗಿಕ ಕಿರುಕುಳ ಪ್ರಕರಣವನ್ನು ವಜಾಗೊಳಿಸುವ ರಾಜಸ್ಥಾನ ಹೈಕೋರ್ಟ್ ನ ತೀರ್ಪನ್ನು ನ್ಯಾಯಮೂರ್ತಿಗಳಾದ ಸಿ.ಟಿ. ರವಿಕುಮಾರ್ ಮತ್ತು ಪಿ.ವಿ. ಸಂಜಯ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠವೊಂದು ರದ್ದುಗೊಳಿಸಿತು.
‘‘ವಿವಾದಿತ ಆದೇಶವನ್ನು ರದ್ದುಗೊಳಿಸಲಾಗಿದೆ. ಇನ್ನು ಮೊದಲ ಮಾಹಿತಿ ವರದಿ (ಎಫ್ಐಆರ್) ಮತ್ತು ಕ್ರಿಮಿನಲ್ ಕಲಾಪಗಳು ಕಾನೂನಿಗೆ ಅನುಗುಣವಾಗಿ ಮುಂದುವರಿಯಬೇಕು. ಪ್ರಕರಣದ ಅರ್ಹತೆ ಬಗ್ಗೆ ನಾವು ಏನೂ ಹೇಳಿಲ್ಲ’’ ಎಂದು ನ್ಯಾಯಾಲಯ ಹೇಳಿತು.
ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು 2023 ಅಕ್ಟೋಬರ್ನಲ್ಲಿ ಕಾದಿರಿಸಿತ್ತು. ಆರೋಪಿ ಮತ್ತು ದೂರುದಾರೆಯ ನಡುವೆ ಆಗಿರುವ ರಾಜಿಯ ಆಧಾರದಲ್ಲಿ ಲೈಂಗಿಕ ಕಿರುಕುಳ ಪ್ರಕರಣವನ್ನು ರದ್ದುಗೊಳಿಸಲು ಸಿಆರ್ಪಿಸಿಯ 482ನೇ ಪರಿಚ್ಛೇದದಡಿ ಸಿಗುವ ಅಧಿಕಾರವನ್ನು ಹೈಕೋರ್ಟ್ ಚಲಾಯಿಸಬಹುದೇ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಪ್ರಶ್ನಿಸಿದೆ.
ಹದಿನೈದು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಪೋಕ್ಸೊ ಕಾಯ್ದೆ ಮತ್ತು ಪರಿಶಿಷ್ಟ ಜಾತಿ/ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಾಗಿತ್ತು.
ಸರಕಾರಿ ಶಾಲಾ ಶಿಕ್ಷಕ ವಿಮಲ್ ಕುಮಾರ್ ಗುಪ್ತ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬುದಾಗಿ ಬಾಲಕಿ ಆರೋಪಿಸಿದ್ದಳು.
ಬಳಿಕ, ಬಾಲಕಿಯ ಕುಟುಂಬ ಮತ್ತು ಆರೋಪಿಯ ನಡುವೆ ರಾಜಿ ನಡೆದಿತ್ತು ಎಂದು ಹೇಳಲಾಗಿದೆ. ಈ ರಾಜಿ ಸೂತ್ರದಂತೆ, ತಾವು ತಪ್ಪು ಗ್ರಹಿಕೆಯಿಂದ ದೂರು ದಾಖಲಿಸಿದ್ದೇವೆ ಮತ್ತು ಗುಪ್ತ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ತಾವು ಈಗ ಬಯಸುವುದಿಲ್ಲ ಎಂಬುದಾಗಿ ಬಾಲಕಿಯ ಕುಟುಂಬ ಬಳಿಕ ಹೇಳಿಕೆ ನೀಡಿತ್ತು.
ಈ ರಾಜಿ ಒಪ್ಪಂದದ ಆಧಾರದಲ್ಲಿ ಆರೋಪಿಯು ರಾಜಸ್ಥಾನ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ, ತನ್ನ ವಿರುದ್ಧದ ಮೊಕದ್ದಮೆಯನ್ನು ವಜಾಗೊಳಿಸುವಂತೆ ಕೋರಿದ್ದನು. ಈ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್, ಆರೋಪಿಯ ವಿರುದ್ಧದ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಆದೇಶ ನೀಡಿತ್ತು.
ಪ್ರಕರಣದೊಂದಿಗೆ ಸಂಬಂಧ ಹೊಂದಿರದ ರಾಮ್ಜಿ ಲಾಲ್ ಬೈರ್ವ ಎಂಬ ವ್ಯಕ್ತಿಯು, ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಹೋಗಿದ್ದರು.
ಕ್ರಿಮಿನಲ್ ಪ್ರಕರಣವೊಂದರಲ್ಲಿ, ಸಂಬಂಧವಿರದ ವ್ಯಕ್ತಿಗಳು ಅರ್ಜಿ ಸಲ್ಲಿಸುವಂತಿಲ್ಲ ಎಂಬುದಾಗಿ ಆರಂಭದಲ್ಲಿ ಸುಪ್ರೀಂ ಕೋರ್ಟ್ ಹೇಳಿತಾದರೂ, ಅರ್ಜಿಯ ವಿಚಾರಣೆ ನಡೆಸಲು ಅಂತಿಮವಾಗಿ ಒಪ್ಪಿಕೊಂಡಿತು.