ಮಾಲಿನ್ಯಮುಕ್ತ ವಾತಾವರಣ ನಿರ್ಮಾಣ ರಾಜ್ಯಗಳು, ಕೇಂದ್ರದ ಸಾಂವಿಧಾನಿಕ ಕರ್ತವ್ಯ : ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ : ಆತಂಕಕಾರಿಯಾಗಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ತಡೆಯಲು ಕಠಿಣ ಕ್ರಮಗಳ ಅನುಷ್ಠಾನದಲ್ಲಿ ವಿಳಂಬಕ್ಕಾಗಿ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು ಗ್ರೇಡೆಡ್ ರಿಸ್ಪಾನ್ಸ್ ಆ್ಯಕ್ಶನ್ ಪ್ಲಾನ್-4(ವಾಯುಮಾಲಿನ್ಯ ಸೂಚ್ಯಂಕ ಆಧರಿತ ಪ್ರತಿಕ್ರಿಯಾತ್ಮಕ ಯೋಜನೆ-ಜಿಆರ್ಎಪಿ 4) ಅಡಿ ನಿರ್ಬಂಧಗಳನ್ನು ಜಾರಿಗೊಳಿಸಲು ತಕ್ಷಣವೇ ತಂಡಗಳನ್ನು ನಿಯೋಜಿಸುವಂತೆ ದಿಲ್ಲಿ-ಎನ್ಸಿಆರ್ ರಾಜ್ಯಗಳಿಗೆ ನಿರ್ದೇಶನ ನೀಡಿತು. ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 450ಕ್ಕಿಂತ ಕಡಿಮೆಯಿದ್ದರೂ ಈ ನಿರ್ಬಂಧಗಳು ಮುಂದುವರಿಯುತ್ತವೆ ಎಂದು ಅದು ಸ್ಪಷ್ಟಪಡಿಸಿತು.
ಎಲ್ಲ ನಾಗರಿಕರು ಮಾಲಿನ್ಯಮುಕ್ತ ವಾತಾವರಣದಲ್ಲಿ ವಾಸಿಸುವುದನ್ನು ಖಚಿತಪಡಿಸುವುದು ಕೇಂದ್ರ ಮತ್ತು ರಾಜ್ಯಗಳ ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಎ.ಜಿ.ಮಸಿಹ್ ಅವರ ಪೀಠವು ಹೇಳಿತು.
ರಾಷ್ಟ್ರೀಯ ರಾಜಧಾನಿ ಪ್ರದೇಶಗಳಲ್ಲಿ ವಾಯುಮಾಲಿನ್ಯವನ್ನು ನಿಯಂತ್ರಿಸಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.
‘ಎಕ್ಯೂಐ ಮಟ್ಟ 450ಕ್ಕಿಂತ ಕೆಳಗಿಳಿದರೂ ಜಿಆರ್ಎಪಿ-4ರಡಿ ನಿರ್ಬಂಧಗಳನ್ನು ಮುಂದುವರಿಸಲು ನಾವು ಆದೇಶಿಸುತ್ತಿದ್ದೇವೆ’ ಎಂದು ಪೀಠವು ಹೇಳಿತು.
12ನೇ ತರಗತಿವರೆಗೆ ಭೌತಿಕ ತರಗತಿಗಳನ್ನು ನಡೆಸುವ ಬಗ್ಗೆ ತಕ್ಷಣ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಎಲ್ಲ ದಿಲ್ಲಿ-ಎನ್ಸಿಆರ್ ರಾಜ್ಯಗಳಿಗೆ ಸೂಚಿಸಿದ ಪೀಠವು,ಜಿಆರ್ಎಪಿ-4 ರಡಿ ನಿರ್ಬಂಧಗಳ ಉಲ್ಲಂಘನೆ ದೂರುಗಳನ್ನು ಸಲ್ಲಿಸಲು ವ್ಯವಸ್ಥೆಯೊಂದನ್ನು ರೂಪಿಸುವಂತೆ ನಿರ್ದೇಶನ ನೀಡಿತು.
ಇದಕ್ಕೂ ಮುನ್ನ ಪೀಠವು, ಜಿಆರ್ಎಪಿ ಹಂತಗಳಡಿ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಅನುಷ್ಠಾನಿಸುವಲ್ಲಿ ವಿಳಂಬದ ಕುರಿತು ದಿಲ್ಲಿ ಸರಕಾರ ಮತ್ತು ವಾಯು ಗುಣಮಟ್ಟ ನಿರ್ವಹಣೆ ಆಯೋಗ (ಸಿಎಕ್ಯೂಎಂ)ವನ್ನು ಪ್ರಶ್ನಿಸಿತು.
ಸೋಮವಾರದಿಂದಲೇ ಜಿಆರ್ಎಪಿ-4 ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ ಮತ್ತು ಭಾರೀ ವಾಹನಗಳು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ದಿಲ್ಲಿ ಸರಕಾರದ ಪರ ವಕೀಲರು ಪೀಠಕ್ಕೆ ತಿಳಿಸಿದರು.
ಎಕ್ಯೂಐ ಆತಂಕಕಾರಿ ಮಟ್ಟವನ್ನು ತಲುಪಿದ ತಕ್ಷಣ ಜಿಆರ್ಎಪಿ ಸ್ಟೇಜ್ಗಳನ್ನು ಜಾರಿಗೊಳಿಸಬೇಕು. ಇಲ್ಲಿ ಸ್ವಲ್ಪವಾದರೂ ತುರ್ತು ವಿವೇಚನೆಯ ಅಗತ್ಯವಿದೆ ಎಂದು ಪೀಠವು ಹೇಳಿತು.
ಎಕ್ಯೂಐ 300 ಮತ್ತು 400ರ ನಡುವಿನ ಮಟ್ಟವನ್ನು ತಲುಪಿದಾಗ ಜಿಆರ್ಎಪಿ-4ನ್ನು ಅನುಷ್ಠಾನಿಸಬೇಕು. ನೀವು ಇದನ್ನು ವಿಳಂಬಿಸುವ ಮೂಲಕ ಇಂತಹ ವಿಷಯಗಳಲ್ಲಿ ಅಪಾಯವನ್ನು ಎದುರು ಹಾಕಿಕೊಳ್ಳಲು ಹೇಗೆ ಸಾಧ್ಯ ಎಂದು ಪೀಠವು ದಿಲ್ಲಿ ಸರಕಾರದ ಪರ ವಕೀಲರನ್ನು ಪ್ರಶ್ನಿಸಿತು.
ಆತಂಕಕಾರಿಯಾಗಿ ಹೆಚ್ಚುತ್ತಿರುವ ವಾಯುಮಾಲಿನ್ಯ ಮಟ್ಟವನ್ನು ನಿಯಂತ್ರಿಸಲು ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ತನಗೆ ತಿಳಿಸುವಂತೆ ಪೀಠವು ದಿಲ್ಲಿ ಸರಕಾರಕ್ಕೆ ತಿಳಿಸಿತು.
ಟ್ರಕ್ಗಳ ಪ್ರವೇಶಕ್ಕೆ ನಿಷೇಧ ಮತ್ತು ಸಾರ್ವಜನಿಕ ಯೋಜನೆಗಳ ನಿರ್ಮಾಣ ಚಟುವಟಿಕೆಗಳ ತಾತ್ಕಾಲಿಕ ಸ್ಥಗಿತ ಸೇರಿದಂತೆ ಜಿಆರ್ಎಪಿ-4ರಡಿ ದಿಲ್ಲಿ-ಎನ್ಸಿಆರ್ಗಾಗಿ ಕಠಿಣ ಮಾಲಿನ್ಯ ನಿಯಂತ್ರಣ ಕ್ರಮಗಳು ಸೋಮವಾರ ಬೆಳಿಗ್ಗೆ ಎಂಟು ಗಂಟೆಯಿಂದ ಜಾರಿಯಲ್ಲಿರುತ್ತವೆ ಎಂದು ಸಿಎಕ್ಯೂಎಂ ರವಿವಾರ ಪ್ರಕಟಿಸಿತ್ತು.
ರವಿವಾರ ಅಪರಾಹ್ನ 441ಕ್ಕೆ ತಲುಪಿದ್ದ ದಿಲ್ಲಿಯ ಏಕ್ಯೂಐ ಪ್ರತಿಕೂಲ ಹವಾಮಾನದಿಂದಾಗಿ ಸಂಜೆ ಏಳು ಗಂಟೆಗೆ 457ಕ್ಕೆ ತಲುಪಿದಾಗ ಸಿಎಕ್ಯೂಎಂ ನಿರ್ಬಂಧಗಳ ಜಾರಿಗೆ ಆದೇಶವನ್ನು ಹೊರಡಿಸಿತ್ತು.
ಆದೇಶದ ಪ್ರಕಾರ,ಅಗತ್ಯ ವಸ್ತುಗಳನ್ನು ಸಾಗಿಸುವ ಅಥವಾ ಶುದ್ಧ ಇಂಧನ(ಎಲ್ಎನ್ಜಿ/ಸಿಎನ್ಜಿ/ಬಿಎಸ್-6 ಡೀಸೆಲ್ ಮತ್ತು ವಿದ್ಯುತ್ಚಾಲಿತ) ಹೊರತುಪಡಿಸಿ ಯಾವುದೇ ಟ್ರಕ್ಗಳು ದಿಲ್ಲಿಯನ್ನು ಪ್ರವೇಶಿಸಲು ಅವಕಾಶವಿಲ್ಲ. ವಿದ್ಯುತ್ ಚಾಲಿತ ಮತ್ತು ಸಿಎನ್ಜಿ,ಬಿಎಸ್-6 ಡೀಸೆಲ್ ಹೊರತುಪಡಿಸಿ ದಿಲ್ಲಿಯ ಹೊರಗೆ ನೋಂದಣಿಯಾಗಿರುವ ಅನಿವಾರ್ಯವಲ್ಲದ ಲಘು ವಾಣಿಜ್ಯ ವಾಹನಗಳನ್ನೂ ನಿಷೇಧಿಸಲಾಗಿದೆ.