ಕಾಲೇಜುಗಳಲ್ಲಿ ಜಾತಿ ತಾರತಮ್ಯ ತಡೆಗೆ ಪರಿಣಾಮಕಾರಿ ಕಾರ್ಯವಿಧಾನ: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ : ದೇಶದಲ್ಲಿಯ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಸೂಕ್ಷ್ಮ ವಿಷಯ ಎಂದು ಶುಕ್ರವಾರ ಬಣ್ಣಿಸಿದ ಸರ್ವೋಚ್ಚ ನ್ಯಾಯಾಲಯವು, ಅದನ್ನು ತಡೆಯಲು ಪರಿಣಾಮಕಾರಿ ಕಾರ್ಯವಿಧಾನವನ್ನು ತಾನು ರೂಪಿಸುವುದಾಗಿ ಹೇಳಿತು.
ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಉಜ್ಜಲ ಭುಯಾನ್ ಅವರ ಪೀಠವು ಕೇಂದ್ರ, ರಾಜ್ಯ, ಖಾಸಗಿ ಮತ್ತು ಡೀಮ್ಡ್ ವಿವಿಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಯಾವುದೇ ಜಾತಿ ಆಧಾರಿತ ತಾರತಮ್ಯವನ್ನು ತಡೆಯಲು ಕರಡು ನಿಯಮಾವಳಿಗಳನ್ನು ಸೂಚಿಸುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ)ಕ್ಕೆ ನಿರ್ದೇಶನ ನೀಡಿತು.
2012ರ ಯುಜಿಸಿ ಸಮಾನತೆ ನಿಯಮಗಳಿಗೆ ಅನುಗುಣವಾಗಿ ಸಮಾನ ಅವಕಾಶ ಕೋಶಗಳನ್ನು ಸ್ಥಾಪಿಸಿರುವ ಶಿಕ್ಷಣ ಸಂಸ್ಥೆಗಳ ಸಂಖ್ಯೆಯ ಕುರಿತು ಮಾಹಿತಿಯನ್ನು ಒದಗಿಸುವಂತೆಯೂ ನಿರ್ದೇಶಿಸಿದ ಪೀಠವು, ‘ಈ ಸೂಕ್ಷ್ಮ ವಿಷಯದ ಬಗ್ಗೆ ನಮಗೂ ಅಷ್ಟೇ ಕಾಳಜಿಯಿದೆ. ನಾವು ಏನಾದರನ್ನು ಮಾಡುತ್ತೇವೆ. 2012ರ ನಿಯಮಾವಳಿಗಳನ್ನು ವಾಸ್ತವಿಕವಾಗಿ ಪಾಲಿಸಲಾಗುತ್ತಿದೆ ಎನ್ನುವುದನ್ನು ನೋಡಲು ಕೆಲವು ಪರಿಣಾಮಕಾರಿ ಕಾರ್ಯವಿಧಾನಗಳನ್ನು ನಾವು ಕಂಡುಕೊಳ್ಳಬೇಕಿದೆ’ ಎಂದು ಹೇಳಿತು.
ಈ ವಿಷಯದಲ್ಲಿ ಕೇಂದ್ರದ ಪ್ರತಿಕ್ರಿಯೆಯನ್ನು ಕೋರಿದ ಪೀಠವು, ಎಲ್ಲ ವಿವಿಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ನಡುವೆ ಇಂತಹ ತಾರತಮ್ಯ ಕುರಿತು ದೂರುಗಳು ಮತ್ತು ತೆಗೆದುಕೊಳ್ಳಲಾದ ಕ್ರಮದ ಬಗ್ಗೆ ಮಾಹಿತಿಯನ್ನು ಆರು ವಾರಗಳಲ್ಲಿ ಸಲ್ಲಿಸುವಂತೆ ಯುಜಿಸಿಗೆ ಸೂಚಿಸಿತು.
ಜಾತಿಯಾಧಾರಿತ ತಾರತಮ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿರುವ ವಿದ್ಯಾರ್ಥಿಗಳಾದ ರೋಹಿತ ವೇಮುಲ ಮತ್ತು ಪಾಯಲ್ ತಡ್ವಿ ಅವರ ತಾಯಂದಿರ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರು, 2004ರಿಂದ ಈವರೆಗೆ ಐಐಟಿಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯದಿಂದಾಗಿ ಹೆಚ್ಚಿನವರು ಎಸ್ಸಿ/ಎಸ್ಟಿಗಳು ಸೇರಿದಂತೆ 50ಕ್ಕೂ ಅಧಿಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಹೈದರಾಬಾದ್ ಕೇಂದ್ರೀಯ ವಿವಿಯಲ್ಲಿ ಪಿಎಚ್ಡಿ ವಿದ್ಯಾರ್ಥಿಯಾಗಿದ್ದ ವೇಮುಲ 2016, ಜ.17ರಂದು ಆತ್ಮಹತ್ಯೆ ಮಾಡಿಕೊಂಡಿದ್ದರೆ ಮುಂಬೈನ ಟಿ.ಎನ್.ಟೋಪಿವಾಲಾ ನ್ಯಾಷನಲ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ತಡ್ವಿ ತನ್ನ ಕಾಲೇಜಿನ ಮೂವರು ವೈದ್ಯರಿಂದ ಜಾತಿ ತಾರತಮ್ಯಕ್ಕೆ ಒಳಗಾದ ಬಳಿಕ 2019, ಮೇ 22ರಂದು ಆತ್ಮಹತ್ಯೆಗೆ ಶರಣಾಗಿದ್ದರು.
2019ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು, ಆದರೆ ಈ ವಿಷಯದಲ್ಲಿ ಈವರೆಗೆ ಯಾವುದೇ ಗಮನಾರ್ಹ ವಿಚಾರಣೆ ನಡೆದಿಲ್ಲ ಎಂದು ಹೇಳಿದ ನ್ಯಾ.ಸೂರ್ಯಕಾಂತ, ‘2019ರಿಂದ ಯಾವುದೇ ಹೆಚ್ಚಿನ ಪ್ರಗತಿಯಾಗದ್ದರಿಂದ ಏನಾದರೂ ಪರಿಣಾಮಕಾರಿ ಪರಿಹಾರವನ್ನು ಕಂಡುಕೊಳ್ಳುವಂತಾಗಲು ಇನ್ನು ಮುಂದೆ ಈ ಅರ್ಜಿಯನ್ನು ನಾವೇ ನಿಯತಕಾಲಿಕವಾಗಿ ವಿಚಾರಣೆಗಾಗಿ ಪಟ್ಟಿ ಮಾಡುತ್ತೇವೆ’ ಎಂದು ತಿಳಿಸಿದರು.
ಆಯೋಗವು ರಚಿಸಿದ್ದ ಸಮಿತಿಯು ತನ್ನ ಶಿಫಾರಸನ್ನು ಸಲ್ಲಿಸಿದ್ದು, ಜಾತಿಯಾಧಾರಿತ ತಾರತಮ್ಯವನ್ನು ನಿಲ್ಲಿಸಲು ಹೊಸ ಕರಡು ನಿಯಮಾವಳಿಯನ್ನು ರಚಿಸಲಾಗಿದೆ. ಒಂದು ತಿಂಗಳೊಳಗೆ ಸಾರ್ವಜನಿಕರಿಂದ ಆಕ್ಷೇಪಗಳು ಮತ್ತು ಸಲಹೆಗಳನ್ನು ಆಹ್ವಾನಿಸಲು ಅದನ್ನು ವೆಬ್ಸೈಟ್ಗೆ ಅಪ್ಲೋಡ್ ಮಾಡಬೇಕಿದೆ ಮತ್ತು ಆ ಬಳಿಕ ಅದನ್ನು ಅಧಿಸೂಚಿಸಲಾಗುವುದು ಎಂದು ಯುಜಿಸಿ ಪರ ವಕೀಲರು ತಿಳಿಸಿದರು.
ವಿಳಂಬದ ಕುರಿತು ಯುಜಿಸಿಯನ್ನು ಪ್ರಶ್ನಿಸಿದ ಪೀಠವು, ಇಷ್ಟೆಲ್ಲ ಸಮಯ ಅದು ನಿದ್ರಿಸಿತ್ತು ಮತ್ತು ಹೊಸ ನಿಯಮಾವಳಿಯನ್ನು ತಂದಿಲ್ಲ ಎಂದು ಕುಟುಕಿತು.
ಹೊಸ ನಿಯಮಾವಳಿಯನ್ನು ಅಧಿಸೂಚಿಸಲು ಎಷ್ಟು ಸಮಯ ಬೇಕು? ಆ ಕೆಲಸವನ್ನು ಒಂದು ತಿಂಗಳಲ್ಲಿ ಮಾಡಿ ಮತ್ತು ಅದನ್ನು ದಾಖಲೆಯಲ್ಲಿರಿಸಿ ಎಂದು ತಾಕೀತು ಮಾಡಿದ ಪೀಠವು, ವಿಚಾರಣೆಯನ್ನು ಆರು ತಿಂಗಳ ಬಳಿಕ ಮುಂದೂಡಿತು.