ಸಲಿಂಗ ವಿವಾಹಕ್ಕೆ ಮಾನ್ಯತೆ ನಿರಾಕರಿಸಿದ ಆದೇಶವನ್ನು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್ ನಿರಾಕರಣೆ
ಸುಪ್ರೀಂ ಕೋರ್ಟ್ | PC : ANI
ಹೊಸದಿಲ್ಲಿ : ಭಾರತದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನಿರಾಕರಿಸಿದ ತನ್ನ ಮಹತ್ವದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಪರಿಶೀಲನಾ ಅರ್ಜಿಗಳನ್ನು ಗುರುವಾರ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಐದು ನ್ಯಾಯಾಧೀಶರ ಪೀಠವು ಗುರುವಾರ ಸಲಿಂಗ ವಿವಾಹದ ಕುರಿತು 2023 ರ ತೀರ್ಪನ್ನು ಪ್ರಶ್ನಿಸುವ ಅರ್ಜಿಗಳನ್ನು ಕೈಗೆತ್ತಿಕೊಂಡಿತು. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಸೂರ್ಯಕಾಂತ್, ಬಿ.ವಿ. ನಾಗರತ್ನ, ಪಿ.ಎಸ್. ನರಸಿಂಹ ಮತ್ತು ದೀಪಂಕರ್ ದತ್ತ ಅವರನ್ನೊಳಗೊಂಡ ಪೀಠವು ಚೇಂಬರ್ಗಳಲ್ಲಿ ಅರ್ಜಿಗಳನ್ನು ಪರಿಶೀಲಿಸಿತು. ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿಲ್ಲ.
ಈ ಹಿಂದೆ ನೀಡಿದ ತೀರ್ಪಿನಲ್ಲಿ, ಸಲಿಂಗ ಒಕ್ಕೂಟಗಳಿಗೆ ಕಾನೂನುಬದ್ಧ ಅನುಮತಿ ನೀಡಲು ಯಾವುದೇ ಸಾಂವಿಧಾನಿಕ ಆಧಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ತನ್ನ ತೀರ್ಪಿನಲ್ಲಿ, ನ್ಯಾಯಾಲಯವು ತನ್ನ ಹಿಂದಿನ ತೀರ್ಪಿನಲ್ಲಿ "ಯಾವುದೇ ದೋಷ ಕಂಡುಬಂದಿಲ್ಲ" ಎಂದು ಹೇಳಿದೆ. ಮೂಲ ತೀರ್ಪಿನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಕಾನೂನಿಗೆ ಅನುಗುಣವಾಗಿವೆ. ಹೆಚ್ಚಿನ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಪೀಠ ಒತ್ತಿ ಹೇಳಿದೆ. ಪರಿಣಾಮವಾಗಿ, ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಎಲ್ಲಾ ಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಿತು.