ದೇಶಾದ್ಯಂತ ಹುಲಿ ಸಂರಕ್ಷಿತಾರಣ್ಯಗಳ ನಿರ್ವಹಣೆ ನೀತಿ ಏಕರೂಪವಾಗಿರಬೇಕು: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ದೇಶಾದ್ಯಂತ ಇರುವ ಹುಲಿ ಸಂರಕ್ಷಿತಾರಣ್ಯಗಳ ನಿರ್ವಹಣೆ ನೀತಿಯು ಏಕರೂಪವಾಗಿರಬೇಕು ಎಂದು ಗುರುವಾರ ಸುಪ್ರೀಂ ಕೋರ್ಟ್ ಅಭಿಮತ ವ್ಯಕ್ತಪಡಿಸಿದೆ.
ಉತ್ತರಾಖಂಡದಲ್ಲಿರುವ ಕಾರ್ಬೆಟ್ ಹುಲಿ ಸಂರಕ್ಷಿತಾರಣ್ಯಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾ. ಬಿ.ಆರ್.ಗವಾಯಿ ನೇತೃತ್ವದ ನ್ಯಾಯಪೀಠವು, ದೇಶಾದ್ಯಂತ ಏಕರೂಪದ ಆಧಾರದ ನೀತಿ ಇರಬೇಕು ಎಂದು ಅಭಿಪ್ರಾಯ ಪಟ್ಟಿತು.
“ಹುಲಿ ಸಂರಕ್ಷಿತಾರಣ್ಯಗಳ ನಿರ್ವಹಣೆಗೆ ಸಂಬಂಧಪಟ್ಟಂತೆ ದೇಶಾದ್ಯಂತ ಏಕರೂಪದ ನೀತಿ ಇರುವುದನ್ನು ನಾವು ಬಯಸುತ್ತೇವೆ” ಎಂದು ನ್ಯಾ. ಆಗಸ್ಟಿನ್ ಜಾರ್ಜ್ ಮಾಸಿಹ್ ಹಾಗೂ ನ್ಯಾ. ಕೆ.ವಿನೋದ್ ಚಂದ್ರನ್ ಅವರನ್ನೂ ಒಳಗೊಂಡಿದ್ದ ನ್ಯಾಯಪೀಠ ಹೇಳಿತು.
ಈ ನೀತಿಯು ಹುಲಿ ಸಂರಕ್ಷಿತಾರಣ್ಯದೊಳಗೆ ವಾಹನ ಸಂಚಾರ ವಿಷಯವನ್ನೂ ಒಳಗೊಂಡಿರಬೇಕು ಎಂಬ ಸಂಗತಿಯನ್ನು ನ್ಯಾಯಪೀಠ ಪರಿಗಣಿಸಿತು.
ಹೊಸ ವರ್ಷದ ಮುನ್ನಾ ದಿನ ಮಹಾರಾಷ್ಟ್ರದ ಉಮ್ರೇದ್ ಪೌನಿ-ಕರ್ಹಾಂಡ್ಲಾ ಪ್ರಾಣಿ ಧಾಮದಲ್ಲಿ ಪ್ರವಾಸಿಗಳನ್ನು ಕರೆದೊಯ್ಯುತ್ತಿದ್ದ ಸಫಾರಿ ವಾಹನವು ತಾಯಿ ಹುಲಿ ಹಾಗೂ ಮರಿ ಹುಲಿಗಳ ಓಡಾಟಕ್ಕೆ ಅಡ್ಡಿಯುಂಟು ಮಾಡಿದ್ದ ಸಂಗತಿಯನ್ನು ಬಾಂಬೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪರಿಗಣಿಸಿದ್ದ ಪ್ರಕರಣವನ್ನು ನ್ಯಾ. ಗವಾಯಿ ಉಲ್ಲೇಖಿಸಿದರು.
ನಂತರ, ಕಾರ್ಬೆಟ್ ಹುಲಿ ಸಂರಕ್ಷಿತಾರಣ್ಯಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಮಾರ್ಚ್ 19ಕ್ಕೆ ಮುಂದೂಡಲಾಯಿತು.