ಭಿನ್ನ ತೀರ್ಪಿನ ಬಳಿಕ ಕ್ರೈಸ್ತ ಪಾದ್ರಿಯ ಮೃತದೇಹವನ್ನು ಗ್ರಾಮದಿಂದ 20 ಕಿ.ಮೀ.ದೂರದಲ್ಲಿ ದಫನ್ ಮಾಡುವಂತೆ ಸುಪ್ರೀಂ ಆದೇಶ

ಸುಪ್ರೀಂ | PTI
ಹೊಸದಿಲ್ಲಿ: ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಪಾದ್ರಿಯಾಗಿದ್ದ ಪರಿಶಿಷ್ಟ ಪಂಗಡದ ವ್ಯಕ್ತಿಯ ಮೃತದೇಹವನ್ನು ಬಸ್ತಾರ್ನ ಛಿಂಚ್ವಾಡಾ ಗ್ರಾಮದ ಸ್ಮಶಾನದಲ್ಲಿ ದಫನ್ ಮಾಡುವ ಹಕ್ಕನ್ನು ನಿರಾಕರಿಸಿದ್ದ ಛತ್ತೀಸ್ಗಡ ಉಚ್ಛ ನ್ಯಾಯಾಲಯದ ಜ.9ರ ತೀರ್ಪಿನ ವಿರುದ್ಧ ಮೃತ ವ್ಯಕ್ತಿಯ ಪುತ್ರ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಸೋಮವಾರ ಭಿನ್ನ ತೀರ್ಪು ನೀಡಿತಾದರೂ, ನ್ಯಾಯಾಧೀಶರು ಮೃತದೇಹವು ಜ.7ರಿಂದಲೂ ಶವಾಗಾರದಲ್ಲಿರುವುದರಿಂದ ವಿಷಯವನ್ನು ವಿಸ್ತೃತ ಪೀಠಕ್ಕೆ ಒಪ್ಪಿಸುವ ಬದಲು ಅದನ್ನು ಇತ್ಯರ್ಥಗೊಳಿಸಲು ಒಮ್ಮತದ ನಿರ್ದೇಶನವನ್ನು ಹೊರಡಿಸಿದರು.
ಛತ್ತೀಸ್ಗಡ ಸರಕಾರವು ಸೂಚಿಸಿರುವಂತೆ ಗ್ರಾಮದಿಂದ 20 ಕಿ.ಮೀ.ದೂರದಲ್ಲಿ ಪಾದ್ರಿಯ ಮೃತದೇಹವನ್ನು ದಫನ್ ಮಾಡುವಂತೆ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಮತ್ತು ಸತೀಶ ಚಂದ್ರ ಶರ್ಮಾ ಅವರ ಪೀಠವು ನಿರ್ದೇಶನ ನೀಡಿತು.
ಗ್ರಾಮಸ್ಥರ ಆಕ್ಷೇಪಣೆಗಳಿಂದಾಗಿ ತನ್ನ ತಂದೆ ಸುಭಾಷ್ ಅವರ ಮೃತದೇಹವನ್ನು ದಫನ್ ಮಾಡಲು ಸಾಧ್ಯವಾಗದೆ ಪರದಾಡುತ್ತಿರುವ ರಮೇಶ ಬಘೇಲ್ ಅವರ ದೂರನ್ನು ಬಗೆಹರಿಸಲು ಛತ್ತೀಸ್ಗಡ ಸರಕಾರ ಮತ್ತು ಉಚ್ಛ ನ್ಯಾಯಾಲಯಕ್ಕೆ ಸಾಧ್ಯವಾಗಿಲ್ಲ ಎನ್ನುವುದು ತನಗೆ ನೋವನ್ನುಂಟು ಮಾಡಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಜ.20ರಂದು ಹೇಳಿತ್ತು.
ಹಿರಿಯ ನಾಗರಿಕರಾಗಿದ್ದ ಸುಭಾಷ್ ಅನಾರೋಗ್ಯದಿಂದಾಗಿ ಜ.7ರಂದು ಮೃತಪಟ್ಟಿದ್ದರು.
ಸುಭಾಷ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರಿಂದ ಅವರ ಮೃತದೇಹವನ್ನು ಅವರ ಹಿಂದು ಪೂರ್ವಜರನ್ನು ದಫನ ಮಾಡಿದ್ದ ಸಾಮಾನ್ಯ ಸ್ಮಶಾನದಲ್ಲಿ ಹೂಳಬಹುದೇ ಎನ್ನುವುದು ವಿವಾದದ ಮೂಲವಾಗಿತ್ತು.
ಕ್ರೈಸ್ತ ಸಮುದಾಯವು ಗ್ರಾಮದಲ್ಲಿ ಪ್ರತ್ಯೇಕ ಸ್ಮಶಾನವನ್ನು ಹೊಂದಿಲ್ಲ. ಆದರೆ ಸುಮಾರು 20 ಕಿ.ಮೀ.ದೂರದ ಕರ್ಕಾಪಲ್ ಗ್ರಾಮದಲ್ಲಿ ಪ್ರತ್ಯೇಕ ದಫನ ಭೂಮಿಯನ್ನು ಹೊಂದಿದೆ ಎನ್ನುವುದನ್ನು ಉಚ್ಛ ನ್ಯಾಯಾಲಯವು ತನ್ನ ಜ.9ರ ತೀರ್ಪಿನಲ್ಲಿ ಗಮನಿಸಿತ್ತು.
ವಿಚಾರಣೆ ಸಂದರ್ಭದಲ್ಲಿ ಛತ್ತೀಸ್ಗಡ ಸರಕಾರ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,ಸಂಭಾವ್ಯ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ತಪ್ಪಿಸಲು ದಫನ ಕಾರ್ಯವು ಕರ್ಕಾಪಾಲ್ನಲ್ಲಿಯ ನಿಯೋಜಿತ ಸ್ಮಶಾನದಲ್ಲಿಯೇ ನಡೆಯಬೇಕು ಎಂದು ಪ್ರತಿಪಾದಿಸಿದ್ದರು.
ಗ್ರಾಮದ ಸ್ಮಶಾನದಲ್ಲಿ ಪಾದ್ರಿಯನ್ನು ದಫನ ಮಾಡಲು ಅವಕಾಶ ನಿರಾಕರಣೆಯು ದುರದೃಷ್ಟಕರ, ತಾರತಮ್ಯಕಾರಿ ಮತ್ತು ಸಂವಿಧಾನ ವಿರೋಧಿಯಾಗಿದೆ ಎಂದು ಸೋಮವಾರ ಹೇಳಿದ ನ್ಯಾ.ನಾಗರತ್ನಾ,ಗ್ರಾಮದಲ್ಲಿ ಮೃತದೇಹ ದಫನವನ್ನು ವಿರೋಧಿಸಿದ್ದ ಗ್ರಾಮ ಪಂಚಾಯಿತಿಯನ್ನು ಟೀಕಿಸಿದರು. ಅದು ದ್ವೇಷಯುತ ತಾರತಮ್ಯವನ್ನು ಸೃಷ್ಟಿಸಿದೆ ಎಂದ ಅವರು, ಯಾವುದೇ ಕ್ರಮವನ್ನು ಕೈಗೊಳ್ಳುವಲ್ಲಿ ವೈಫಲ್ಯಕ್ಕಾಗಿ ಮತ್ತು ಜಾತ್ಯತೀತತೆಯ ತತ್ವಗಳಿಗೆ ದ್ರೋಹ ಬಗೆದಿದ್ದಕ್ಕಾಗಿ ರಾಜ್ಯ ಸರಕಾರವನ್ನೂ ಟೀಕಿಸಿದರು.
ನ್ಯಾ.ನಾಗರತ್ನಾ ತನ್ನ ತೀರ್ಪಿನಲ್ಲಿ ಪಾದ್ರಿಯ ಮೃತದೇಹವನ್ನು ಗ್ರಾಮದಲ್ಲಿಯ ಅವರ ಕುಟುಂಬದ ಖಾಸಗಿ ಕೃಷಿ ಭೂಮಿಯಲ್ಲಿ ದಫನ ಮಾಡುವುದನ್ನು ಪ್ರಸ್ತಾವಿಸಿದರು. ಅಸ್ತಿತ್ವದಲ್ಲಿರುವ ನಿಯಮಗಳು ಅದಕ್ಕೆ ಅವಕಾಶ ನೀಡುವುದಿಲ್ಲ ಎಂಬ ರಾಜ್ಯ ಸರಕಾರದ ಕಳವಳಗಳಿಗೆ ಅವರು ಸೊಪ್ಪು ಹಾಕಲಿಲ್ಲ.
ದಫನ ಕಾರ್ಯಗಳಿಗೆ ಸರಕಾರವು ಭದ್ರತೆಯನ್ನು ಒದಗಿಸಬೇಕು ಎಂದು ಹೇಳಿದ ನ್ಯಾ.ನಾಗರತ್ನಾ, ಎಲ್ಲ ರಾಜ್ಯಗಳಲ್ಲಿ ಸರಕಾರಗಳು ಎರಡು ತಿಂಗಳುಗಳಲ್ಲಿ ಕ್ರೈಸ್ತರಿಗಾಗಿ ದಫನ ಭೂಮಿಗಳನ್ನು ಗುರುತಿಸಬೇಕು ಎಂದೂ ಹೇಳಿದರು.
ಆದರೆ ಭಿನ್ನ ತೀರ್ಪು ನೀಡಿದ ನ್ಯಾ.ಶರ್ಮಾ,ಮತ್ತೊಂದು ಧರ್ಮಕ್ಕೆ ಮೀಸಲಾದ ಸ್ಮಶಾನದಲ್ಲಿ ದಫನ ಮಾಡುವ ಹಕ್ಕು ಸಾರ್ವಜನಿಕ ಸುವ್ಯವಸ್ಥೆಗೆ ಭಂಗವನ್ನುಂಟು ಮಾಡಬಹುದು. ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವುದು ಸಮಾಜದ ಆದ್ಯ ಹಿತಾಸಕ್ತಿಯಾಗಿದೆ ಎಂದು ಹೇಳಿದರು.
ಉಚ್ಛ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದ ಅವರು,ಹೆಚ್ಚಾಗಿ ದಫನ ಭೂಮಿಗಳನ್ನು ನಿರ್ದಿಷ್ಟ ಧಾರ್ಮಿಕ ಸಮುದಾಯಗಳಿಗಾಗಿ ನಿಗದಿ ಮಾಡಲಾಗಿರುತ್ತದೆ. ಈ ಪ್ರಕರಣದಲ್ಲಿ ಕ್ರೈಸ್ತರಿಗಾಗಿ ಗುರುತಿಸಲಾಗಿರುವ ಸ್ಥಳವು 20 ಕಿ.ಮೀ.ದೂರದಲ್ಲಿದೆ. ಧಾರ್ಮಿಕ ಸ್ವಾತಂತ್ರ್ಯವನ್ನು ಇತರ ಧಾರ್ಮಿಕ ಗುಂಪುಗಳಿಗಾಗಿ ನಿಗದಿಗೊಳಿಸಲಾಗಿರುವ ಸ್ಥಳಗಳಲ್ಲಿ ದಫನ ಹಕ್ಕನ್ನು ಪ್ರತಿಪಾದಿಸಲು ವಿಸ್ತರಿಸಲಾಗುವುದಿಲ್ಲ ಎಂದು ಹೇಳಿದರು.