ಅತ್ಯಾಚಾರ ಪ್ರಕರಣಗಳಲ್ಲಿ ‘‘ಆಕ್ಷೇಪಾರ್ಹ’’ ಹೇಳಿಕೆ; ಅಲಹಾಬಾದ್ ಹೈಕೋರ್ಟ್ಗೆ ಸುಪ್ರೀಂ ಕೋರ್ಟ್ ತರಾಟೆ

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಅತ್ಯಾಚಾರ ಪ್ರಕರಣಗಳಲ್ಲಿ ಇತ್ತೀಚೆಗೆ ನೀಡಿರುವ ‘‘ಆಕ್ಷೇಪಾರ್ಹ’’ ಹೇಳಿಕೆಗಳಿಗಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಅಲಹಾಬಾದ್ ಹೈಕೋರ್ಟ್ನ್ನು ತರಾಟೆಗೆ ತೆಗೆದುಕೊಂಡಿದೆ.
ಅಲಹಾಬಾದ್ನ ಇತ್ತೀಚಿನ ತೀರ್ಪೊಂದರ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ವಿದ್ಯಾರ್ಥಿನಿಯೊಬ್ಬರ ಮೇಲೆ ಅತ್ಯಾಚಾರಗೈದ ಆರೋಪ ಎದುರಿಸುತ್ತಿದ್ದ ವ್ಯಕ್ತಿಗೆ ಹೈಕೋರ್ಟ್ ಜಾಮೀನು ನೀಡಿತ್ತು ಹಾಗೂ ‘‘ಆ ಮಹಿಳೆಯೇ ಸ್ವತಃ ಸಮಸ್ಯೆಯನ್ನು ಆಹ್ವಾನಿಸಿಕೊಂಡಿದ್ದಾಳೆ’’ ಎಂದು ಹೇಳಿತ್ತು.
ಅಲಹಾಬಾದ್ ಹೈಕೋರ್ಟ್ನ ಇನ್ನೊಂದು ತೀರ್ಪಿನ ವಿರುದ್ಧ ತಾನೇ ದಾಖಲಿಸಿದ್ದ ಸ್ವಯಂಪ್ರೇರಿತ ದೂರಿನ ವಿಚಾರಣೆ ನಡೆಸಿದ ವೇಳೆ ಸುಪ್ರೀಂ ಕೋರ್ಟ್ ಈ ಹೇಳಿಕೆ ನೀಡಿದೆ. ‘‘ಸ್ತನವನ್ನು ಸ್ಪರ್ಶಿಸಿದ ಮಾತ್ರಕ್ಕೆ ಅದು ಅತ್ಯಾಚಾರ ಆಗುವುದಿಲ್ಲ’’ ಎಂಬ ಅಲಹಾಬಾದ್ ಹೈಕೋರ್ಟ್ನ ಮಾರ್ಚ್ 17ರ ಆದೇಶದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿತ್ತು.
‘‘ಇನ್ನೊಬ್ಬ ನ್ಯಾಯಾಧೀಶರು ಇನ್ನೊಂದು ತೀರ್ಪು ಕೊಟ್ಟಿದ್ದಾರೆ. ಹೌದು, ಜಾಮೀನು ನೀಡಬಹುದು... ಆದರೆ, ಸ್ವತಃ ಆಕೆಯೇ ಸಮಸ್ಯೆ ಆಹ್ವಾನಿಸಿಕೊಂಡಿದ್ದಳು ಎಂಬ ಮಾತು ಇಲ್ಲಿ ಯಾಕೆ ಬಂತು? ಇಂಥ ವಿಷಯಗಳನ್ನು ಹೇಳುವಾಗ ನ್ಯಾಯಾಧೀಶರು ತುಂಬಾ ಜಾಗರೂಕತೆಯಿಂದ ಇರಬೇಕು’’ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಎ.ಜಿ. ಮಸಿಹ್ ಅವರನ್ನೊಳಗೊಂಡ ನ್ಯಾಯಪೀಠವೊಂದು ಹೇಳಿತು.