2020ರ ದಿಲ್ಲಿ ಗಲಭೆ ಪ್ರಕರಣ: ಉಮರ್ ಖಾಲಿದ್ ಜಾಮೀನು ವಿಚಾರಣೆಯನ್ನು ಜ.24ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್
Photo: PTI
ಹೊಸದಿಲ್ಲಿ: ಈಶಾನ್ಯ ದಿಲ್ಲಿಯಲ್ಲಿ 2020 ಫೆಬ್ರವರಿಯಲ್ಲಿ ಸಂಭವಿಸಿದ್ದ ಗಲಭೆಗಳ ಹಿಂದಿನ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ದಾಖಲಾಗಿರುವ ಪ್ರಕರಣದಲ್ಲಿ ಜೆಎನ್ ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸರ್ವೋಚ್ಛ ನ್ಯಾಯಾಲಯವು ಜ.24ರವರೆಗೆ ಮುಂದೂಡಿದೆ.
ಬುಧವಾರ ವಿಚಾರಣೆ ಸಂದರ್ಭದಲ್ಲಿ ಖಾಲಿದ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು,ತಾನು ಸಂವಿಧಾನ ಪೀಠದ ಮುಂದೆ ವ್ಯಸ್ತನಾಗಿರುವುದರಿಂದ ವಿಚಾರಣೆಯನ್ನು ಮುಂದೂಡುವಂತೆ ಮಾಡಿಕೊಂಡ ಮನವಿಯನ್ನು ನ್ಯಾಯಮೂರ್ತಿಗಳಾದ ಬೇಲಾ ಎಂ.ತ್ರಿವೇದಿ ಮತ್ತು ಪಂಕಜ ಮಿತ್ತಲ್ ಅವರ ಪೀಠವು ಪುರಸ್ಕರಿಸಿತು. ಜ.24ರಂದು ಮತ್ತೆ ವಿಚಾರಣೆಯನ್ನು ಮುಂದೂಡುವುದಿಲ್ಲ ಎಂದು ಪೀಠವು ಸ್ಪಷ್ಟಪಡಿಸಿತು.
ಯುಎಪಿಎನ ವಿವಿಧ ನಿಬಂಧನೆಗಳನ್ನು ಪ್ರಶ್ನಿಸಿರುವ ಅರ್ಜಿಗಳ ಜೊತೆ ಖಾಲಿದ್ ಅರ್ಜಿಯನ್ನು ಪಟ್ಟಿ ಮಾಡಲಾಗಿತ್ತು.
ಸಿಎಎ ವಿರುದ್ಧ ಪ್ರತಿಭಟನೆ ವೇಳೆ ಸಂಭವಿಸಿದ್ದ ಈಶಾನ್ಯ ದಿಲ್ಲಿ ಗಲಭೆಗಳ ಹಿಂದಿನ ಸಂಚಿನ ರೂವಾರಿಗಳಾಗಿದ್ದರು ಎಂಬ ಆರೋಪದಲ್ಲಿ ಖಾಲಿದ್,ಶಾರ್ಜೀಲ್ ಇಮಾಂ ಮತ್ತು ಇತರ ಹಲವರ ವಿರುದ್ಧ ಯುಎಪಿಎ ಅಡಿ ಪ್ರಕರಣಗಳು ದಾಖಲಾಗಿವೆ. ಗಲಭೆಗಳಲ್ಲಿ 53 ಜನರು ಮೃತಪಟ್ಟಿದ್ದು, 700ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.
ದಿಲ್ಲಿ ಪೋಲಿಸರು 2020,ಸೆಪ್ಟಂಬರ್ ನಲ್ಲಿ ಖಾಲಿದ್ ರನ್ನು ಬಂಧಿಸಿದ್ದರು.