ಮೂಕ ವಕೀಲೆಗೆ ಸುಪ್ರೀಂನಿಂದ ಸಂಕೇತ ಭಾಷಾ ವ್ಯಾಖ್ಯಾನಕಾರರ ನೇಮಕ
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ : ವಾಕ್-ಶ್ರವಣ ದೋಷವುಳ್ಳ ವಕೀಲೆ ಸಾರಾ ಸನ್ನಿ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸಂಕೇತ ಭಾಷಾ ವ್ಯಾಖ್ಯಾನಕಾರರನ್ನು ನೇಮಕ ಮಾಡಿದೆ.
ಸುಪ್ರೀಂ ಕೋರ್ಟಿನಲ್ಲಿ ವಾದ ಮಾಡಲು ನೋಂದಣಿ ಮಾಡಿದ ವಾಕ್-ಶ್ರವಣ ದೋಷವುಳ್ಳ ಭಾರತದ ಮೊದಲ ವಕೀಲೆ ಸಾರಾ ಸನ್ನಿಯಾಗಿದ್ದಾರೆ.
ತನಗೆ ನೆರವು ನೀಡಲು ಭಾರತೀಯ ಸಂಕೇತ ಭಾಷಾ ವ್ಯಾಖ್ಯಾನಕಾರರನ್ನು ನೇಮಿಸುವಂತೆ ಸುಪ್ರೀಂ ಕೋರ್ಟಿನ ರಿಜಿಸ್ಟ್ರಿಯಲ್ಲಿ ಸಾರಾ ಅವರು ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ಸಾರಾ ಅವರು ಹಿರಿಯ ಸಹೋದ್ಯೋಗಿ ಸಂಚಿತಾ ಅವರ ಮೂಲಕ ಈ ಅರ್ಜಿ ಸಲ್ಲಿಸಿದ್ದರು.
‘‘ನಾವು ಇಂದು ಸಾರಾ ಅವರಿಗಾಗಿ ವ್ಯಾಖ್ಯಾನಕಾರರನ್ನು ಹೊಂದಿದ್ದೇವೆ. ವಾಸ್ತವವಾಗಿ ಸಂವಿಧಾನ ಪೀಠದ ವಿಚಾರಣೆಗಾಗಿ ನಾವು ವ್ಯಾಖ್ಯಾನಕಾರರನ್ನು ಹೊಂದಿದ್ದೇವೆ ಎಂದು ಭಾವಿಸುತ್ತೇವೆ. ಆದುದರಿಂದ ಎಲ್ಲರೂ ಇದನ್ನು ಅನುಸರಿಸಬಹುದು’’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದರು.
ವರ್ಚುವಲ್ ವಿಚಾರಣೆಯಲ್ಲಿ ವ್ಯಾಖ್ಯಾನಕಾರರು ಸಾರಾ ಅವರಿಗೆ ನೆರವು ನೀಡುತ್ತಿದ್ದಾರೆ. ವ್ಯಾಖ್ಯಾನಕಾರರ ವ್ಯವಸ್ಥೆ ಮಾಡಿರುವುದಕ್ಕೆ ಸಂಚಿತಾ ಅವರು ಮುಖ್ಯ ನ್ಯಾಯಮೂರ್ತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸಾರಾ ಅವರು ಕಳೆದ ತಿಂಗಳು ತನ್ನ ಪ್ರಕರಣವನ್ನು ಭಾರತೀಯ ಸಂಕೇತ ಭಾಷಾ ವ್ಯಾಖ್ಯಾನಕಾರರ ನೆರವಿನಿಂದ ವಾದಿಸಿದ್ದರು. ಈ ಸಂದರ್ಭ ಸಾರಾ ಅವರಿಗೆ ವ್ಯಾಖ್ಯಾನಕಾರರ ನೆರವಿನಿಂದ ವಾದಿಸಲು ಅವಕಾಶ ನೀಡುವಂತೆ ಸಂಚಿತಾ ಅವರು ಚಂದ್ರಚೂಡ್ ಅವರಲ್ಲಿ ಮನವಿ ಮಾಡಿದ್ದರು. ಚಂದ್ರಚೂಡ್ ಅವರು ಕೂಡಲೇ ಅನುಮತಿ ನೀಡಿದ್ದರು.