ಸಿಜೆಐ ವಿರುದ್ಧದ ಹೇಳಿಕೆ | ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಒತ್ತಾಯ

ನಿಶಿಕಾಂತ್ ದುಬೆ , ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ : ಸುಪ್ರೀಂ ಕೋರ್ಟ್ ಮತ್ತು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ವಿರುದ್ಧ ನೀಡಿರುವ ಹೇಳಿಕೆಗೆ ಸಂಬಂಧಿಸಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಂತೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಆಗ್ರಹಿಸಿದೆ.
ʼಸುಪ್ರೀಂ ಕೋರ್ಟ್ ಕಾನೂನುಗಳನ್ನು ರೂಪಿಸುವುದಾದರೆ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳನ್ನು ಮುಚ್ಚಿ, ದೇಶದಲ್ಲಿ ʼಅಂತರ್ಯುದ್ಧʼ ಉಂಟಾದರೆ ಸಿಜೆಐ ಖನ್ನಾ ಅವರೇ ಅದಕ್ಕೆ ಕಾರಣʼ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದರು.
ನ್ಯಾಯಾಂಗ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಬಗ್ಗೆ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗಳನ್ನು ಬಲವಾಗಿ ಖಂಡಿಸುವ ನಿರ್ಣಯವನ್ನು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್(SCBA) ಅಂಗೀಕರಿಸಿದೆ. ಇದು ಸ್ವೀಕಾರಾರ್ಹವಲ್ಲದ ದಾಳಿ ಎಂದು ಹೇಳಿದೆ.
ಇಂತಹ ಹೇಳಿಕೆಗಳು ಮಾನಹಾನಿಕಾರಕ ಮಾತ್ರವಲ್ಲದೆ ನ್ಯಾಯಾಂಗದ ಘನತೆಗೆ ನೇರವಾದ ಅವಮಾನವನ್ನುಂಟು ಮಾಡುತ್ತದೆ. ಕಾನೂನು ಪ್ರಕಾರ ಈ ಬಗ್ಗೆ ಕ್ರಮವನ್ನು ಕೈಗೊಳ್ಳಬೇಕು ಎಂದು SCBA ನಿರ್ಣಯದಲ್ಲಿ ಹೇಳಿದೆ. ಇದಲ್ಲದೆ, ದುಬೆ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಒಪ್ಪಿಗೆ ನೀಡುವಂತೆ SCBA ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರನ್ನು ಒತ್ತಾಯಿಸಿದೆ.
1971ರ ನ್ಯಾಯಾಂಗ ನಿಂದನೆ ಕಾಯಿದೆಯಡಿ, ಓರ್ವ ವ್ಯಕ್ತಿಯು ಅಟಾರ್ನಿ ಜನರಲ್ ಅಥವಾ ಸಾಲಿಸಿಟರ್ ಜನರಲ್ ಅವರ ಅನುಮೋದನೆ ಬಳಿಕ ಮಾತ್ರವೇ ಸುಪ್ರೀಂ ಕೋರ್ಟ್ನಲ್ಲಿ ನಿಂದನೆ ಅರ್ಜಿಯನ್ನು ಸಲ್ಲಿಸಬಹುದು ಎಂದು Bar and Bench ವರದಿ ಮಾಡಿದೆ.
ಮಂಗಳವಾರ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ಮುಂದಿನ ವಾರ ವಿಚಾರಣೆಗೆ ಪಟ್ಟಿ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠದ ಮುಂದೆ ವಕೀಲರೋರ್ವರು ಈ ವಿಷಯವನ್ನು ಪ್ರಸ್ತಾಪಿಸಿದರು. ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಪ್ರಾರಂಭಿಸಲು ಅನುಮತಿ ನೀಡುವಂತೆ ಮಾಡಿದ ಮನವಿಗೆ ಅಟಾರ್ನಿ ಜನರಲ್ ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ಹೇಳಿದರು.