ಬಿಹಾರ | ಉಪ ಚುನಾವಣಾ ಫಲಿತಾಂಶ ಘೋಷಿಸದಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ಬಂಧ
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಈ ಹಿಂದೆ ಆರ್ಜೆಡಿಯ ಉಚ್ಚಾಟಿತ ನಾಯಕ ಸುನೀಲ್ ಕುಮಾರ್ ಸಿಂಗ್ ಹೊಂದಿದ್ದ ವಿಧಾನ ಪರಿಷತ್ ಸ್ಥಾನಕ್ಕೆ ನಡೆದ ಉಪ ಚುನಾವಣಾ ಫಲಿತಾಂಶವನ್ನು ಪ್ರಕಟಿಸದಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಬುಧವಾರ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಕಳೆದ ವರ್ಷ ಜುಲೈ 26ರಂದು ವಿಧಾನಪರಿಷತ್ ನಲ್ಲಿ ಸಂಸದೀಯ ನಿಯಮಗಳಿಗೆ ವಿರುದ್ಧವಾದ ವರ್ತನೆ ತೋರಿದ ಆರೋಪದ ಮೇಲೆ ಸುನೀಲ್ ಕುಮಾರ್ ಸಿಂಗ್ ಅವರನ್ನು ಬಿಹಾರ ವಿಧಾನ ಪರಿಷತ್ ನಿಂದ ಉಚ್ಚಾಟಿಸಲಾಗಿತ್ತು.
ಫೆಬ್ರವರಿ 13, 2024ರಂದು ಸದನದಲ್ಲಿ ನಡೆದ ಬಿಸಿಬಿಸಿ ಮಾತಿನ ಚಕಮಕಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಘೋಷಣೆ ಕೂಗಿದ ಆರೋಪವನ್ನು ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಕುಟುಂಬದ ನಿಕಟವರ್ತಿ ಎಂದೇ ಪರಿಗಣಿಸಲಾಗಿರುವ ಸುನೀಲ್ ಕುಮಾರ್ ಸಿಂಗ್ ವಿರುದ್ಧ ಹೊರಿಸಲಾಗಿತ್ತು.
ವಿಧಾನ ಪರಿಷತ್ ಸ್ಥಾನಕ್ಕೆ ನಡೆದ ಚುನಾವಣೆಯು ಅವಿರೋಧವಾಗಿ ಮುಕ್ತಾಯಗೊಂಡಿರುವುದರಿಂದ, ಜನವರಿ 16ರಂದು ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಸುನೀಲ್ ಕುಮಾರ್ ಸಿಂಗ್ ಅವರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಮನು ಅವರು ನ್ಯಾ. ಸೂರ್ಯಕಾಂತ್ ಹಾಗೂ ಎನ್.ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.
ಈ ವಿಷಯದ ಕುರಿತು ಈಗಾಗಲೇ ವಿಚಾರಣೆ ನಡೆಯುತ್ತಿರುವುದರಿಂದ, ಇದೇ ವೇಳೆ ಸದರಿ ಸ್ಥಾನದ ಫಲಿತಾಂಶವನ್ನು ಘೋಷಿಸಬಾರದು ಎಂದು ನ್ಯಾಯಪೀಠ ನಿರ್ದೇಶನ ನೀಡಿತು.
“ಅರ್ಜಿದಾರರನ್ನು ವಜಾಗೊಳಿಸಿದ್ದರಿಂದ ಖಾಲಿಯಾಗಿರುವ ವಿಧಾನ ಪರಿಷತ್ ಸ್ಥಾನಕ್ಕೆ ನಡೆದಿರುವ ಉಪ ಚುನಾವಣೆಯ ಫಲಿತಾಂಶವನ್ನು ಘೋಷಿಸಬಾರದು” ಎಂದು ನ್ಯಾಯಾಲಯ ಆದೇಶಿಸಿದೆ.