ಯಮುನಾ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರಾಗಿ ದಿಲ್ಲಿ ಲೆ.ಗ.ನೇಮಕಕ್ಕೆ ಸುಪ್ರೀಂ ಕೋರ್ಟ್ ತಡೆ
ಸುಪ್ರೀಂ ಕೋರ್ಟ್ | Photo : PTI
ಹೊಸದಿಲ್ಲಿ: ಯಮುನಾ ಪುನರುಜ್ಜೀವನ ಯೋಜನೆಯ ಮೇಲ್ವಿಚಾರಣೆಗಾಗಿ ಉನ್ನತ ಮಟ್ಟದ ಸಮಿತಿಯ ಮುಖ್ಯಸ್ಥರನ್ನಾಗಿ ದಿಲ್ಲಿಯ ಲೆಫ್ಟಿನಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರನ್ನು ನೇಮಕಗೊಳಿಸಿದ್ದ ಜ.9,2023ರ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಜಿಎನ್ಟಿ)ದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ತಡೆಯನ್ನು ನೀಡಿದೆ.
ಎನ್ಜಿಟಿ ಆದೇಶವನ್ನು ಪ್ರಶ್ನಿಸಿ ದಿಲ್ಲಿ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಈ ತಡೆಯಾಜ್ಞೆಯನ್ನು ಹೊರಡಿಸಿದೆ.
ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರಾಗಿ ಲೆಫ್ಟಿನಂಟ್ ಗವರ್ನರ್ ನೇಮಕವು ‘ಸಾಂವಿಧಾನಿಕ ಆಡಳಿತ ಯೋಜನೆ ’ಯ ಹಾಗೂ ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠವು 2018 ಮತ್ತು 2023ರಲ್ಲಿ ನೀಡಿದ್ದ ತೀರ್ಪುಗಳ ಉಲ್ಲಂಘನೆಯಾಗಿದೆ ಎಂದು ದಿಲ್ಲಿ ಸರಕಾರವು ವಾದಿಸಿತ್ತು.
ಯಮುನಾ ಮಾಲಿನ್ಯ ಸಮಸ್ಯೆಯನ್ನು ಪರಿಹರಿಸಲು ಎನ್ಜಿಟಿ ಈ ವರ್ಷದ ಜನವರಿಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು.
ಎನ್ಜಿಟಿ ಆದೇಶದ ಮೂಲಕ ಲೆಫ್ಟಿನಂಟ್ ಗವರ್ನರ್ಗೆ ನೀಡಲಾಗಿರುವ ಕಾರ್ಯಕಾರಿ ಅಧಿಕಾರಗಳು ಚುನಾಯಿತ ಸರಕಾರದ ಅಧಿಕಾರದಡಿ ಇರುವ ಪ್ರತ್ಯೇಕ ಕ್ಷೇತ್ರಗಳನ್ನು ಅತಿಕ್ರಮಿಸಿದೆ ಎಂದು ವಾದಿಸಿದ್ದ ದಿಲ್ಲಿ ಸರಕಾರವು,ಅವರಿಗೆ ನೀಡಲಾಗಿರುವ ಕಾರ್ಯಕಾರಿ ಅಧಿಕಾರಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು.
ಯಮುನಾ ನದಿ ಮಾಲಿನ್ಯ ಸಮಸ್ಯೆಯನ್ನು ನಿಭಾಯಿಸುವ ಅಧಿಕಾರವು ಸರಕಾರದ ಚುನಾಯಿತ ನಾಯಕರ,ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಬಳಿಯಲ್ಲಿರಬೇಕು ಎಂದೂ ದಿಲ್ಲಿ ಸರಕಾರದ ಪರ ಹಿರಿಯ ನ್ಯಾಯವಾದಿ ಎ.ಎಂ.ಸಿಂಘ್ವಿ ವಾದಿಸಿದರು.
ಯಮುನಾ ನದಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮಟ್ಟ ಮತ್ತು ಸೂಕ್ತ ಕ್ರಮವನ್ನು ಕೈಗೊಳ್ಳುವಲ್ಲಿ ಅಧಿಕಾರಿಗಳ ವೈಫಲ್ಯವನ್ನು ಬೆಟ್ಟು ಮಾಡಿ ಅಶ್ವನಿ ಯಾದವ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಎನ್ಜಿಟಿ ಉನ್ನತ ಮಟ್ಟದ ಸಮಿತಿ ರಚನೆಯ ನಿರ್ಧಾರವನ್ನು ಕೈಗೊಂಡಿತ್ತು.