ನ್ಯಾಯಾಧೀಶರ ಮಕ್ಕಳನ್ನು ಹೈಕೋರ್ಟ್ ನ್ಯಾಯಾಧೀಶರನ್ನಾಗಿ ಶಿಫಾರಸು ಮಾಡುವುದಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ತಡೆ ಸಾಧ್ಯತೆ: ವರದಿ
ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ಹಾಲಿ ಅಥವಾ ಮಾಜಿ ಸಾಂವಿಧಾನಿಕ ನ್ಯಾಯಾಲಯಗಳ ನ್ಯಾಯಾಧೀಶರ ಕುಟುಂಬದ ಸದಸ್ಯರನ್ನು ಹೈಕೋರ್ಟ್ ನ್ಯಾಯಾಧೀಶರನ್ನಾಗಿ ಶಿಫಾರಸು ಮಾಡುವುದನ್ನು ತಡೆ ಹಿಡಿಯುವ ಯೋಜನೆಯನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಹೊಂದಿದೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಪ್ರಸ್ತಾವನೆಗೆ ಕೆಲವರು ಬೆಂಬಲ ಸೂಚಿಸಿದ್ದು, ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾ. ಬಿ.ಆರ್.ಗವಾಯಿ, ನ್ಯಾ. ಸೂರ್ಯಕಾಂತ್, ನ್ಯಾ. ಹೃಷಿಕೇಶ್ ರಾಯ್ ಹಾಗೂ ನ್ಯಾ. ಎ.ಎಸ್.ಓಕಾ ಅವರನ್ನು ಸದಸ್ಯರನ್ನಾಗಿ ಒಳಗೊಂಡಿರುವ ಸುಪ್ರೀಂ ಕೋರ್ಟ್ ಕೊಲಿಜಿಯಂನ ಗಮನವನ್ನೂ ಈ ಪ್ರಸ್ತಾವನೆ ಸೆಳೆದಿದೆ.
ನ್ಯಾಯಾಧೀಶರ ಆಯ್ಕೆ ಪ್ರಕ್ರಿಯೆ ವೇಳೆ ಈ ವಕೀಲರು ಮೊದಲ ತಲೆಮಾರಿನ ವಕೀಲರಿಗಿಂತ ಹೆಚ್ಚು ಆದ್ಯತೆ ಪಡೆಯುತ್ತಾರೆ ಎಂಬ ಭಾವನೆಯನ್ನು ಹೋಗಲಾಡಿಸುವ ಗುರಿಯನ್ನು ಈ ಪ್ರಸ್ತಾವನೆ ಹೊಂದಿದೆ ಎಂದು ಹೇಳಲಾಗಿದೆ.
ಸಂಸತ್ತು ಸರ್ವಾನುಮತದಿಂದ ಜಾರಿಗೆ ತಂದಿದ್ದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗವನ್ನು 2015ರಲ್ಲಿ ಐವರು ನ್ಯಾಯಾಧೀಶರನ್ನೊಳಗೊಂಡಿದ್ದ ಸಾಂವಿಧಾನಿಕ ಪೀಠವು ರದ್ದುಗೊಳಿಸಿತ್ತು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇಮಕಾತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ನ ಎರಡು ತೀರ್ಪುಗಳ ಮೂಲಕ ಅಸ್ತಿತ್ವಕ್ಕೆ ಬಂದಿದ್ದ ಕೊಲಿಜಿಯಂ ವ್ಯವಸ್ಥೆಯಿಂದ ಕಿತ್ತುಕೊಳ್ಳುವ ಗುರಿಯನ್ನು ಈ ನಡೆ ಒಳಗೊಂಡಿತ್ತು. ಅಂದಿನಿಂದ, ನ್ಯಾಯಾಧೀಶರ ಆಯ್ಕೆ ಪ್ರಕ್ರಿಯೆಯಲ್ಲಿ ಕೆಲ ಮಟ್ಟಿನ ಪಾರದರ್ಶಕತೆಯನ್ನು ತರಲು ಸುಪ್ರೀಂ ಕೋರ್ಟ್ ಪ್ರಯತ್ನಿಸುತ್ತಿದೆ. ಹೀಗಿದ್ದೂ, ಈಗಲೂ ಈ ವ್ಯವಸ್ಥೆ ಕುರಿತು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತವಾಗುತ್ತಿರುವುದರಿಂದ ಈ ಕ್ರಮ ಸಾಕಾಗುತ್ತಿಲ್ಲ.
TOI ಸುದ್ದಿ ಸಂಸ್ಥೆ ಪ್ರಕಾರ, ನ್ಯಾಯಾಧೀಶರಿಂದ ನ್ಯಾಯಾಧೀಶರ ಆಯ್ಕೆ ವ್ಯವಸ್ಥೆಯು, “ನೀನು ನನ್ನ ಬೆನ್ನು ಕೆರಿ, ನಾನು ನಿನ್ನ ಬೆನ್ನು ಕೆರೆಯುತ್ತೇನೆ” ಎಂಬ ರೂಢಿಯನ್ನು ಪ್ರೋತ್ಸಾಹಿಸುತ್ತಿದೆ. ಹಾಲಿ ಅಥವಾ ಮಾಜಿ ಸಾಂವಿಧಾನಿಕ ನ್ಯಾಯಾಲಯಗಳ ನ್ಯಾಯಾಧೀಶರ ಹಲವಾರು ಮಕ್ಕಳನ್ನು ಹೈಕೋರ್ಟ್ ನ್ಯಾಯಾಧೀಶ ಹುದ್ದೆಗೆ ಶಿಫಾರಸು ಮಾಡುತ್ತಿರುವುದರಿಂದ ಇಡೀ ಆಯ್ಕೆ ಪ್ರಕ್ರಿಯೆ ಕಳಂಕಿತವಾಗಿದೆ ಎಂದು ಭಾವಿಸಲಾಗಿದೆ. ಶೇ.50ರಷ್ಟು ಹೈಕೋರ್ಟ್ ನ್ಯಾಯಾಧೀಶರು ಹಾಲಿ ಅಥವಾ ಮಾಜಿ ಸಾಂವಿಧಾನಿಕ ನ್ಯಾಯಾಲಯಗಳ ನ್ಯಾಯಾಧೀಶರನ್ನು ಹತ್ತಿರದ ಸಂಬಂಧಿಗಳನ್ನಾಗಿ ಹೊಂದಿದ್ದರು ಎಂದು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗದ ವಿಚಾರಣೆಯ ವೇಳೆ ವಕೀಲರೊಬ್ಬರು ಆರೋಪಿಸಿದ್ದರು ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.