ಓಟಿಟಿ, ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲತೆ: ಸುಪ್ರೀಂ ಕೋರ್ಟ್ ಕಳವಳ

ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ಓಟಿಟಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಕ್ಷೇಪಾರ್ಹ ಮತ್ತು ಅಶ್ಲೀಲ ವಿಷಯಗಳ ಬಗ್ಗೆ ಸೋಮವಾರ ಗಂಭೀರ ಕಳವಳವನ್ನು ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರ ಮತ್ತು ಹಲವಾರು ಸ್ಟ್ರೀಮಿಂಗ್ ಪ್ಲ್ಯಾಟ್ಫಾರ್ಮ್ಗಳಿಗೆ ನೋಟಿಸ್ಗಳನ್ನು ಹೊರಡಿಸಿದೆ. ಈ ಕುರಿತು ಏನಾದರೊಂದು ರೀತಿಯ ನಿಯಂತ್ರಣ ಅಗತ್ಯವಿದೆ ಎಂದು ಅದು ಹೇಳಿದೆ.
ಓಟಿಟಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಕ್ಷೇಪಾರ್ಹ ಮತ್ತು ಅಶ್ಲೀಲ ವಿಷಯಗಳ ಪ್ರಸಾರವನ್ನು ನಿಷೇಧಿಸಲು ಕೇಂದ್ರಕ್ಕೆ ನಿರ್ದೇಶನವನ್ನು ಕೋರಿ ಹಿರಿಯ ಪತ್ರಕರ್ತ ಉದಯ ಮಹೂರ್ಕರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಎ.ಜಿ.ಮಸಿಹ್ ಅವರ ಪೀಠವು, ‘ನಾವು ಪ್ರತಿವಾದಿಗಳಿಗೆ ನೋಟಿಸ್ ನೀಡುತ್ತಿದ್ದೇವೆ. ನೆಟ್ ಫ್ಲಿಕ್ಸ್ ಇತ್ಯಾದಿಗಳೂ ಇಲ್ಲಿಗೆ ಬರಲಿ, ಅವುಗಳಿಗೂ ಸಾಮಾಜಿಕ ಜವಾಬ್ದಾರಿಯಿದೆ ಎಂದು ಹೇಳಿತು. ಇದೇ ವೇಳೆ ಪೀಠವು, ಆನ್ ಲೈನ್ ನಲ್ಲಿ ಅಸಭ್ಯ ವಿಷಯಗಳನ್ನು ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಕಾರ್ಯಾಂಗ ಮತ್ತು ಶಾಸಕಾಂಗದ ಕೆಲಸವಾಗಿದೆ ಎಂದೂ ಹೇಳಿತು.
ಪಿಐಎಲ್ ನಲ್ಲಿ ಹುರುಳಿರುವುದನ್ನು ಕಂಡುಕೊಂಡ ಸರ್ವೋಚ್ಚ ನ್ಯಾಯಾಲಯವು, ಕೇಂದ್ರ, ನೆಟ್ಫ್ಲಿಕ್ಸ್, ಅಮೆಝಾನ್ ಪ್ರೈಮ್, ಉಲ್ಲು, ಎಎಲ್ಟಿಟಿ, ಎಕ್ಸ್(ಹಿಂದಿನ ಟ್ವಿಟರ್), ಫೇಸ್ಬುಕ್, ಇನ್ಸ್ಟಾಗ್ರಾಂ ಮತ್ತು ಇತರರಿಗೆ ನೋಟಿಸ್ಗಳನ್ನು ಹೊರಡಿಸಿ, ವಿವರವಾಗಿ ಉತ್ತರಿಸುವಂತೆ ಸೂಚಿಸಿತು.
ಕೇಂದ್ರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು, ಕೆಲವು ನಿಬಂಧನೆಗಳು ಈಗಾಗಲೇ ಜಾರಿಯಲ್ಲಿವೆ ಮತ್ತು ಇನ್ನಷ್ಟು ನಿಬಂಧನೆಗಳ ಬಗ್ಗೆ ಚಿಂತನೆಯನ್ನು ನಡೆಸಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಕೆಲವು ವಿಷಯಗಳು ಎಷ್ಟೊಂದು ವಿಕೃತವಾಗಿರುತ್ತವೆ ಎಂದರೆ ಇಬ್ಬರು ಗೌರವಾನ್ವಿತ ಪುರುಷರು ಜೊತೆಯಾಗಿ ಕುಳಿತು ಅವುಗಳನ್ನು ವೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ಅಸ್ತಿತ್ವದಲ್ಲಿರುವ 18+ ವಯಸ್ಸಿನ ಎಚ್ಚರಿಕೆಗಳ ಹೊರತಾಗಿಯೂ ಬಲವಾದ ನಿಗಾದ ಅಗತ್ಯವನ್ನು ಒತ್ತಿ ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೂರ್ವ ತಪಾಸಣೆಯಿಲ್ಲದೆ ಅಶ್ಲೀಲ ವಿಷಯಗಳನ್ನು ಪ್ರಸಾರ ಮಾಡುವ ಪುಟಗಳು ಅಥವಾ ಪ್ರೊಫೈಲ್ಗಳಿವೆ ಮತ್ತು ವಿವಿಧ ಒಟಿಟಿ ವೇದಿಕೆಗಳು ಮಕ್ಕಳ ಅಶ್ಲೀಲತೆಯ ಸಂಭಾವ್ಯ ಅಂಶಗಳನ್ನೂ ಹೊಂದಿರುವ ವಿಷಯಗಳನ್ನು ಹರಿಬಿಡುತ್ತಿವೆ ಎಂದು ಮಹೂರ್ಕರ್ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.
ಮಹೂರ್ಕರ್ ಪರ ವಕೀಲ ವಿಷ್ಣು ಶಂಕರ ಜೈನ್ ಅವರು, ಅರ್ಜಿಯು ವಿರೋಧಾತ್ಮಕವಾಗಿಲ್ಲ, ಆದರೆ ಅಶ್ಲೀಲ ವಿಷಯಗಳಿಗೆ ಅನಿರ್ಬಂಧಿತ ಪ್ರವೇಶದ ಬಗ್ಗೆ ಪ್ರಾಮಾಣಿಕವಾದ ಕಳವಳಗಳನ್ನು ಎತ್ತಿ ತೋರಿಸಿದೆ ಎಂದು ಒತ್ತಿ ಹೇಳಿದರು.
ಅನಿಯಂತ್ರಿತ ಲೈಂಗಿಕ ವಿಷಯಗಳು ಯುವಜನರು ಮತ್ತು ಮಕ್ಕಳ ಮನಸ್ಸುಗಳನ್ನು ಕಲುಷಿತಗೊಳಿಸಬಹುದು. ಅವರಲ್ಲಿ ವಿಕೃತ ಪ್ರವೃತ್ತಿಗಳನ್ನು ಬೆಳೆಸಬಹುದು ಮತ್ತು ಅಪರಾಧ ಪ್ರಮಾಣವನ್ನು ಹೆಚ್ಚಿಸಬಹುದು ಎಂದು ಮಹೂರ್ಕರ್ ಅರ್ಜಿಯು ಎಚ್ಚರಿಸಿದೆ. ಇಂತಹ ವಿಷಯಗಳ ಹರಡುವಿಕೆಯನ್ನು ನಿಯಂತ್ರಿಸದಿದ್ದರೆ ಅದು ಸಾಮಾಜಿಕ ಮೌಲ್ಯಗಳು, ಮಾನಸಿಕ ಆರೋಗ್ಯ ಮತ್ತು ಸಾರ್ವಜನಿಕ ಸುರಕ್ಷತೆಯ ಮೇಲೆ ಗಂಭೀರ ಪರಿಣಾಮವನ್ನು ಬೀರಬಹುದು ಎಂದು ಮಹೂರ್ಕರ್ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳಿಗೆ ಪದೇ ಪದೇ ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಪರಿಣಾಮಕಾರಿ ಕ್ರಮವನ್ನು ತೆಗೆದುಕೊಳ್ಳಲಾಗಿಲ್ಲ, ಹೀಗಾಗಿ ಸಾರ್ವಜನಿಕ ನೈತಿಕತೆಯನ್ನು ಕಾಪಾಡಲು ಮತ್ತು ಡಿಜಿಟಲ್ ಕ್ಷೇತ್ರದಲ್ಲಿ ದುರ್ಬಲರನ್ನು ರಕ್ಷಿಸಲು ನ್ಯಾಯಾಂಗದ ಹಸ್ತಕ್ಷೇಪದ ಅಗತ್ಯವಿದೆ ಎಂದೂ ಅರ್ಜಿಯು ಬೆಟ್ಟು ಮಾಡಿದೆ.