ದಿಲ್ಲಿ, ಎನ್ಸಿಆರ್ ನಲ್ಲಿ ಪಟಾಕಿ ನಿಷೇಧ ರದ್ದುಗೊಳಿಸಲು ಸುಪ್ರೀಂ ನಿರಾಕರಣೆ
ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ದಿಲ್ಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶ (ಎನ್ಸಿಆರ್)ದಲ್ಲಿ ಪಟಾಕಿ ಉತ್ಪಾದನೆ, ದಾಸ್ತಾನು ಹಾಗೂ ಮಾರಾಟಕ್ಕೆ ವಿಧಿಸಿರುವ ನಿಷೇಧ ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಹಾಗೂ ಉಜ್ಜಲ್ ಭುಯಾನ್ಅವರ ಪೀಠ, ಬೀದಿಗಳಲ್ಲಿ ಕೆಲಸ ಮಾಡುವ ದೊಡ್ಡ ಸಂಖ್ಯೆಯ ಜನರು ವಾಯು ಮಾಲಿನ್ಯದಿಂದ ತೊಂದರೆ ಅನುಭವಿಸುತ್ತಿದ್ದಾರೆ. ವಾಯು ಮಾಲಿನ್ಯದ ವಿರುದ್ಧ ಹೋರಾಡಲು ಪ್ರತಿಯೊಬ್ಬರೂ ತಮ್ಮ ಕೆಲಸದ ಸ್ಥಳ ಹಾಗೂ ಮನೆಗಳಿಗೆ ಏರ್ ಪ್ಯೂರಿಫಯರ್ಗಳನ್ನು ಕೊಂಡು ಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
ಕಳೆದ ಆರು ತಿಂಗಳಲ್ಲಿ ಈ ನ್ಯಾಯಾಲಯ ನೀಡಿರುವ ಆದೇಶಗಳು ಅತ್ಯಧಿಕ ಮಟ್ಟದ ವಾಯು ಮಾಲಿನ್ಯದಿಂದಾಗಿ ದಿಲ್ಲಿಯ ಭೀಕರ ಪರಿಸ್ಥಿತಿಯನ್ನು ಮುನ್ನೆಲೆಗೆ ತಂದಿದೆ. ಆರೋಗ್ಯದ ಹಕ್ಕು ಸಂವಿಧಾನದ ಕಲಂ 21ರ ಅಗತ್ಯದ ಭಾಗವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಹಸಿರು ಪಟಾಕಿಗಳು ಎಂದು ಕರೆಯಲಾಗುವ ಪಟಾಕಿಗಳಿಂದ ವಾಯು ಮಾಲಿನ್ಯ ತೀರಾ ಕಡಿಮೆ ಎಂದು ನ್ಯಾಯಾಲಯಕ್ಕೆ ಮನವರಿಕೆಯಾಗುವ ವರೆಗೆ ಈ ಹಿಂದಿನ ಆದೇಶಗಳನ್ನು ಮರು ಪರಿಶೀಲಿಸುವ ಪ್ರಶ್ನೆಯೇ ಇಲ್ಲ ಎಂದು ಅದು ಹೇಳಿದೆ.
ದಿಲ್ಲಿ-ಎನ್ಸಿಆರ್ ನಲ್ಲಿ ಪಟಾಕಿಗಳ ನಿಷೇಧ ಆದೇಶ ಮಾರ್ಪಡಿಸುವಂತೆ ಕೋರಿ ಪಟಾಕಿ ಕಂಪೆನಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋಟ್ ವಿಚಾರಣೆ ನಡೆಸಿತು.