ನ್ಯಾಯಾಂಗ ವೇತನ ಆಯೋಗದ ಶಿಫಾರಸುಗಳ ಜಾರಿಗೆ ಸಮಿತಿಗಳನ್ನು ರಚಿಸುವಂತೆ ಹೈಕೋರ್ಟ್ ಗಳಿಗೆ ಸುಪ್ರೀಂ ಕೋರ್ಟ್ ಆದೇಶ
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ : ದೇಶಾದ್ಯಂತ ನ್ಯಾಯಾಂಗ ಅಧಿಕಾರಿಗಳ ಸೇವಾ ಷರತ್ತುಗಳಲ್ಲಿ ಏಕರೂಪತೆಯನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಿಸಿರುವ ಸರ್ವೋಚ್ಛ ನ್ಯಾಯಾಲಯವು, ಎರಡನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗದ ಶಿಫಾರಸುಗಳಂತೆ ನ್ಯಾಯಾಂಗ ಅಧಿಕಾರಿಗಳ ವೇತನ, ಪಿಂಚಣಿ ಮತ್ತು ಇತರ ನಿವೃತ್ತಿ ಸೌಲಭ್ಯಗಳನ್ನು ಜಾರಿಗೊಳಿಸಲು ಪ್ರತಿ ಉಚ್ಛ ನ್ಯಾಯಾಲಯದಲ್ಲಿ ಇಬ್ಬರು ನ್ಯಾಯಾಧೀಶರ ಸಮಿತಿಯನ್ನು ರಚಿಸುವಂತೆ ಆದೇಶಿಸಿದೆ.
ನ್ಯಾಯಾಧೀಶರು ಆರ್ಥಿಕ ಘನತೆಯೊಂದಿಗೆ ಜೀವನ ಸಾಗಿಸಲು ಸಾಧ್ಯವಾದಾಗ ಮಾತ್ರ ಕಾನೂನಾತ್ಮಕ ಆಡಳಿತದಲ್ಲಿ ಜನಸಾಮಾನ್ಯರ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಳ್ಳಲು ಅಗತ್ಯವಾದ ನ್ಯಾಯಾಂಗ ಸ್ವಾತಂತ್ರ್ಯವನ್ನು ಖಚಿತ ಪಡಿಸಬಹುದು ಮತ್ತು ಹೆಚ್ಚಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಹೇಳಿತು.
ನ್ಯಾಯಾಧೀಶರು ಸೇವೆಯಲ್ಲಿರುವಾಗ ಸೇವಾ ಷರತ್ತುಗಳು ಘನತೆಯುಕ್ತ ಜೀವನವನ್ನು ಖಚಿತಪಡಿಸಬೇಕು. ನಿವೃತ್ತಿ ನಂತರದ ಸೇವಾ ಷರತ್ತುಗಳು ನ್ಯಾಯಾಧೀಶರ ಘನತೆ ಮತ್ತು ಹುದ್ದೆಯ ಸ್ವಾತಂತ್ರ್ಯದ ಮೇಲೆ ಮತ್ತು ಅದನ್ನು ಸಮಾಜವು ಹೇಗೆ ಗ್ರಹಿಸುತ್ತಿದೆ ಎನ್ನುವುದರ ಮೇಲೆ ನಿರ್ಣಾಯಕ ಪರಿಣಾಮವನ್ನು ಹೊಂದಿವೆ ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ ಮಿಶ್ರಾ ಅವರನ್ನೂ ಒಳಗೊಂಡಿದ್ದ ಪೀಠವು ಹೇಳಿತು.
ಇತರ ಸೇವೆಗಳಲ್ಲಿಯ ಅಧಿಕಾರಿಗಳ ಸೇವಾ ಷರತ್ತುಗಳನ್ನು 2016, ಜ.1ರಷ್ಟು ಹಿಂದೆಯೇ ಪರಿಷ್ಕರಿಸಲಾಗಿದ್ದರೂ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದ ಇಂತಹುದೇ ವಿಷಯಗಳು ಎಂಟು ವರ್ಷಗಳ ಬಳಿಕವೂ ಅಂತಿಮ ನಿರ್ಧಾರಕ್ಕೆ ಕಾಯುತ್ತಿರುವುದು ಗಂಭೀರ ಕಳವಳದ ವಿಷಯವಾಗಿದೆ ಎಂದು ಹೇಳಿದ ಪೀಠವು, ಸೇವೆಯಿಂದ ನಿವೃತ್ತಗೊಂಡಿರುವ ನ್ಯಾಯಾಧೀಶರು ಮತ್ತು ನಿಧನರಾಗಿರುವ ನ್ಯಾಯಾಧೀಶರ ಕುಟುಂಬ ಪಿಂಚಣಿದಾರರೂ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ ಎಂದು ಬೆಟ್ಟು ಮಾಡಿತು.
ಈ ನ್ಯಾಯಾಲಯವು ಅನುಮೋದಿಸಿರುವಂತೆ ವೇತನ ಆಯೋಗದ ಶಿಫಾರಸುಗಳ ಜಾರಿಯ ಮೇಲ್ವಿಚಾರಣೆಗಾಗಿ ಪ್ರತಿ ಉಚ್ಛ ನ್ಯಾಯಾಲಯದಲ್ಲಿ ಸಮಿತಿಯನ್ನು ರಚಿಸುವಂತೆ ನಾವು ನಿರ್ದೇಶಿಸುತ್ತಿದೇವೆ, ಸಮಿತಿಯನ್ನು ‘ಜಿಲ್ಲಾ ನ್ಯಾಯಾಂಗ ಸೇವಾ ಷರತ್ತುಗಳ ಸಮಿತಿ’ ಕರೆಯಲಾಗುವುದು ಎಂದು ಸರ್ವೋಚ್ಛ ನ್ಯಾಯಾಲಯವು ತನ್ನ ಜ.4ರ ಆದೇಶದಲ್ಲಿ ತಿಳಿಸಿದೆ. ಆದೇಶವನ್ನು ರಂದು ವೆಬ್ ಸೈಲ್ಲಿ ಅಪ್ಲೋಡ್ ಮಾಡಲಾಗಿದೆ.
ಉಚ್ಛ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಅವರು ಸಮಿತಿಯ ಪದನಿಮಿತ್ತ ಕಾರ್ಯದರ್ಶಿಗಳಾಗಿರುತ್ತಾರೆ ಮತ್ತು ದೈನಂದಿನ ಕುಂದುಕೊರತೆಗಳನ್ನು ಪರಿಹರಿಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಬೇಕು ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.
ಸಂಬಂಧಪಟ್ಟ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ನಾಮನಿರ್ದೇಶನ ಮಾಡಿದ ಅತ್ಯಂತ ಹಿರಿಯ ನ್ಯಾಯಾಧೀಶರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ ಎಂದೂ ಆದೇಶದಲ್ಲಿ ಹೇಳಲಾಗಿದೆ.
ನ್ಯಾಯಾಂಗ ಅಧಿಕಾರಿಗಳು, ನಿವೃತ್ತ ನ್ಯಾಯಾಂಗ ಅಧಿಕಾರಿಗಳು ಮತ್ತು ಕುಟುಂಬ ಪಿಂಚಣಿದಾರರಿಗೆ ಬಾಕಿಯಿರುವ ವೇತನ,ಪಿಂಚಣಿ ಮತ್ತು ಭತ್ತೆಗಳನ್ನು ಲೆಕ್ಕ ಹಾಕಿ 2024, ಫೆ.29ರಂದು ಅಥವಾ ಅದಕ್ಕೂ ಮುನ್ನ ಪಾವತಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯವು ಸೂಚಿಸಿದೆ.
ಉಚ್ಛ ನ್ಯಾಯಾಲಯಗಳ ಆಶ್ರಯದಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಂದೂ ಸಮಿತಿಯು ತನ್ನ ವರದಿಯನ್ನು ರಿಜಿಸ್ಟ್ರಾರ್ ಜನರಲ್ 2024, ಎ.7 ರೊಳಗೆ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.