ವಿಶೇಷ ಪೀಠಗಳ ರಚನೆಗೆ ಹೈಕೋರ್ಟ್ಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ
ಸಂಸದರು, ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಮೇಲ್ವಿಚಾರಣೆ
ಸುಪ್ರೀಂಕೋರ್ಟ್ | Photo: PTI
ಹೊಸದಿಲ್ಲಿ: ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಮೇಲ್ವಿಚಾರಣೆಗಾಗಿ ವಿಶೇಷ ಪೀಠಗಳನ್ನು ರಚಿಸುವಂತೆ ಸರ್ವೋಚ್ಚ ನ್ಯಾಯಾಲಯವು ಗುರುವಾರ ಉಚ್ಚ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ.
ನಿರ್ದೇಶನವು ವಕೀಲ ಹಾಗೂ ಬಿಜೆಪಿ ನಾಯಕ ಅಶ್ವಿನಿಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಮನೋಜ ಮಿಶ್ರಾ ಅವರ ಪೀಠವು ಹೊರಡಿಸಿದ ಮಾರ್ಗಸೂಚಿಗಳ ಭಾಗವಾಗಿದೆ.
ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ತ್ವರಿತ ವಿಲೇವಾರಿಯನ್ನು ಉಪಾಧ್ಯಾಯ ಕೋರಿದ್ದು, ಕೇಂದ್ರವು ಅದನ್ನು ವಿರೋಧಿಸಿದೆ. ಆದರೆ ಚುನಾವಣಾ ಆಯೋಗವು ಉಪಾಧ್ಯಾಯರ ಅರ್ಜಿಯನ್ನು ಬೆಂಬಲಿಸಿದೆ.
ಶಿಕ್ಷೆಗೊಳಗಾದ ಸಂಸದರು ಮತ್ತು ಶಾಸಕರಿಗೆ ಜೀವಿತಾವಧಿ ನಿಷೇಧವನ್ನು ವಿಧಿಸಬೇಕು ಎಂದೂ ಉಪಾಧ್ಯಾಯ ತನ್ನ ಅರ್ಜಿಯಲ್ಲಿ ಕೋರಿದ್ದಾರೆ.
16 ಉಚ್ಚ ನ್ಯಾಯಾಲಯಗಳಲ್ಲಿ ಸಂಸದರು ಮತ್ತು ಶಾಸಕರಿಗೆ ಸಂಬಂಧಿಸಿದ 962 ಪ್ರಕರಣಗಳು ಐದು ವರ್ಷಗಳಿಗೂ ಅಧಿಕ ಸಮಯದಿಂದ ಬಾಕಿಯಾಗಿವೆ ಎಂದು ಸರ್ವೋಚ್ಚ ನ್ಯಾಯಾಲಯದ ಪೀಠಕ್ಕೆ ನೆರವಾಗಿದ್ದ ಅಮಿಕಸ್ ಕ್ಯೂರೆ ವಿಜಯ ಹನ್ಸಾರಿಯಾ ಅವರು ಕಳೆದ ವರ್ಷದ ನವಂಬರ್ನಲ್ಲಿ ತಿಳಿಸಿದ್ದರು.
ಮರಣದಂಡನೆ, ಜೀವಾವಧಿ ಶಿಕ್ಷೆ ಅಥವಾ ಐದು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಜೈಲುಶಿಕ್ಷೆಯನ್ನು ವಿಧಿಸಬಹುದಾದ ಪ್ರಕರಣಗಳಿಗೆ ಆದ್ಯತೆಯನ್ನು ನೀಡಬೇಕು ಎಂದು ಮಾರ್ಗಸೂಚಿಗಳಲ್ಲಿ ತಿಳಿಸಿರುವ ಸರ್ವೋಚ್ಚ ನ್ಯಾಯಾಲಯವು, ಅಪರೂಪದ ಮತ್ತು ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿ ಈ ಪ್ರಕರಣಗಳನ್ನು ಮುಂದೂಡದಂತೆ ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ.
ವಿಶೇಷ ಪೀಠವು ತ್ವರಿತ ವಿಚಾರಣೆಗಾಗಿ ಆದೇಶಗಳನ್ನು ಹೊರಡಿಸಬಹುದು ಮತ್ತು ಅಡ್ವೋಕೇಟ್ ಜನರಲ್ ಹಾಗೂ ಸರಕಾರಿ ಅಭಿಯೋಜಕರ ನೆರವನ್ನು ಕೋರಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ತಿಳಿಸಿದೆ.
ಉಚ್ಚ ನ್ಯಾಯಾಲಯಗಳು ವಿಚಾರಣಾ ನ್ಯಾಯಾಲಯಗಳಿಗೆ ಪ್ರಕರಣಗಳ ಹಂಚಿಕೆಗಾಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು ನೇಮಕಗೊಳಿಸಬಹುದು ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು ಉಪಾಧ್ಯಾಯರ ಅರ್ಜಿಯನ್ನು ವಿಲೇವಾರಿಗೊಳಿಸಿತು.